Latest

ಧರ್ಮಸ್ಥಳದಲ್ಲಿ ಆಣೆ ಮಾಡಿದ ಹರತಾಳು ಹಾಲಪ್ಪ

ಪ್ರಗತಿವಾಹಿನಿ ಸುದ್ದಿ; ಧರ್ಮಸ್ಥಳ: ಮರಳು ಲಾರಿಯಿಂದ ಕಮಿಷನ್ ಆರೋಪಕ್ಕೆ ಸಂಬಂಧಿಸಿದಂತೆ ಶಾಸಕ ಹರತಾಳು ಹಾಲಪ್ಪ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡಿದ್ದಾರೆ.

ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಶಾಸಕ ಹರತಾಳು ಹಾಲಪ್ಪ ವಿರುದ್ಧ ಮರಳು ಲಾರಿಯಿಂದ ಕಮಿಷನ್ ಪಡೆಯುತ್ತಿರುವ ಬಗ್ಗೆ ಆರೋಪ ಮಾಡಿದ್ದರಲ್ಲದೇ, ತಾಕತ್ತಿದ್ದರೆ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದರು. ಸವಾಲು ಸ್ವೀಕರಿಸಿದ್ದ ಶಾಸಕ ಹಾಲಪ್ಪ ಇದೀಗ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಿದ್ದಾರೆ.

ಧರ್ಮಸ್ಥಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹರತಾಳು ಹಾಲಪ್ಪ, ನಾನು ಮರಳು ಲಾರಿಗಳಿಂದ ಯಾವುದೇ ಕಮಿಷನ್, ಹಣ ಪಡೆದಿಲ್ಲ. ಅನಗತ್ಯವಾಗಿ ನನ್ನ ವಿರುದ್ಧ ಬೇಳೂರು ಗೋಪಾಲಕೃಷ್ಣ ಆರೋಪ ಮಾಡಿದ್ದಾರೆ. ತಾಕತ್ತಿದ್ದರೆ ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡುವಂತೆ ಹೇಳಿದ್ದರು. ಇದು ತಾಕತ್ತಿನ ಪ್ರಶ್ನೆ ಅಲ್ಲ, ಸತ್ಯಾಅಸತ್ಯತೆ ಪ್ರಶ್ನೆ. ಹಾಗಾಗಿ ನಾನು ಇಂದು ದೇವರ ಮುಂದೆ ಪ್ರಮಾಣ ಮಾಡಿದ್ದೇನೆ. ನಾನು ಯಾವುದೇ ಕಮಿಷನ್ ಪಡೆದಿಲ್ಲ ಎಂದು. ನಾನು ಯಾವುದೇ ತಪ್ಪು ಮಾಡಿಲ್ಲ ಹಾಗಾಗಿ ಪ್ರಮಾಣ ಮಾಡಿದ್ದೇನೆ ಎಂದರು.

ನನಗೆ ಆಣೆ-ಪ್ರಮಾಣಕ್ಕೆ ಬರುವಂತೆ ಹೇಳಿ ಬೇಳೂರು ಪಲಾಯನ ಮಾಡಿದ್ದಾರೆ. ಈವರೆಗೂ ಧರ್ಮಸ್ಥಳಕ್ಕೆ ಬಂದಿಲ್ಲ. ಬೇಳೂರು ಗೋಪಾಲಕೃಷ್ಣ ವಿನಾಕಾರಣ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಅವರಿಗೆ ಬುದ್ಧಿ ಭ್ರಮಣೆಯಾಗಿದೆ. ದೇವರು ಅವರಿಗೆ ಸದ್ಬುದ್ಧಿ ನೀಡಲಿ ಎಂದು ಪ್ರಾರ್ಥಿಸಿದ್ದೇನೆ ಎಂದು ಹೇಳಿದರು.

ಇದೇ ವೇಳೆ ಮರಳು ಲಾರಿಯ ಹಲವು ಚಾಲಕರು ಕೂಡ ತಾವು ಯಾವುದೇ ಕಮಿಷನ್ ನೀಡಿಲ್ಲ ಎಂದು ಪ್ರಮಾಣ ಮಾಡಿದ್ದಾರೆ.

ಮದುವೆ ಆರತಕ್ಷತೆ ದಿನ ಕುಸಿದು ಬಿದ್ದ ವಧು; ಬ್ರೇನ್ ಡೆಡ್ ಎಂದು ಘೋಷಿಸಿದ ನಿಮ್ಹಾನ್ಸ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button