
ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರಿಗೆ ಬೆದರಿಕೆ ಹಾಕಿದ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿ ಆದೇಶ ಹೊರಡಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರ ಕಾರನ್ನು ಸ್ಕಾರ್ಪಿಯೋ ವಾಹನದಲ್ಲಿ ಬಂದ ದುಷ್ಕರ್ಮಿಗಳು ಅಡ್ಡಗಟ್ಟಿ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಕೆ ಹಾಕಿದ್ದರು. ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ಈ ಬಗ್ಗೆ ಶಾಸಕ ಹರೀಶ್ ಪೂಂಜಾ ಕಾರು ಚಾಲಕ ನವೀನ್ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ಸಂಬಂಧ ಪೊಲೀಸರು ಸ್ಕಾರ್ಪಿಯೋ ಕಾರಿನಲ್ಲಿ ಬಂದಿದ್ದ ರಿಯಾಜ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಬಳಿಕ ಇದು ಯಾವುದೇ ಕೊಲೆ ಯತ್ನ ಪ್ರಕರಣವಲ್ಲ, ಕಾರನ್ನು ಓವರ್ ಟೇಕ್ ಮಾಡುವ ಭರದಲ್ಲಿ ಗಲಾಟೆಯಾಗಿ ನಡೆದ ಘಟನೆ. ಸ್ಕಾರ್ಪಿಯೋ ಕಾರಿನಲ್ಲಿದ್ದ ರಿಯಾಜ್ ನನ್ನು ವಶಕ್ಕೆ ಪಡೆಯಲಾಗಿದೆ ಆತನ ಬಳಿ ಯಾವುದೇ ಆಯುಧ ಪತ್ತೆಯಾಗಿಲ್ಲ. ಇನ್ನು ಈ ಹಿಂದೆ ಆತನ ವಿರುದ್ಧ ಯಾವುದೇ ಪ್ರಕರಣ ಕೂಡ ದಾಖಲಾಗಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲೆ ಎಸ್ ಪಿ ಋಷಿಕೇಶ್ ತಿಳಿಸಿದ್ದರು.
ಆದರೆ ಈಬಗ್ಗೆ ಶಾಸಕ ಹರೀಶ್ ಪೂಂಜಾ ತನಗೆ ಬೆದರಿಕೆ ಹಾಕಿದ ಪ್ರಕರಣದ ಹಿಂದೆ ಜಿಹಾದಿ ಕೈವಾಡವಿರುವ ಸಾಧ್ಯತೆ ಇದೆ. ನಾನು ಹಿಂದುತ್ವದ ಪರವಾಗಿ ಕೆಲಸ ಮಾಡುವ ಶಾಸಕ. ನನ್ನ ಮೇಲೆ ಜಿಹಾದಿ ಶಕ್ತಿಗಳು ಹಗೆ ಸಾಧಿಸುವ ಸಾಧ್ಯತೆ ಇದೆ ಎಂದು ಹೇಳಿದ್ದರು.
ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಇದೀಗ ಪ್ರಕರಣವನ್ನು ರಾಜ್ಯ ಸರ್ಕಾರ ಅಪರಾಧ ತನಿಖಾ ದಳ (ಸಿಐಡಿ) ತನಿಖೆಗೆ ವಹಿಸಿ ಆದೇಶ ಹೊರಡಿಸಿದೆ.
KPTCL ನೇಮಕಾತಿ ಅಕ್ರಮ; ಕಿಂಗ್ ಪಿನ್ ಸೇರಿ 20 ಆರೋಪಿಗಳಿಗೆ ಜಾಮೀನು
https://pragati.taskdun.com/latest/kptcl-scame20-accusedreleasebail/




