ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ವಿವಿಧ ಫಲಾನುಭವಿಗಳಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮುಖ್ಯಮಂತ್ರಿಗಳ ಪರಿಹಾರ ನಿಧಿ ಚೆಕ್ ಮತ್ತು ಬೇರೆ ಬೇರೆ ಯೋಜನೆಗಳ ಅಡಿಯಲ್ಲಿ ಪಿಂಚಣಿ ಪತ್ರಗಳನ್ನು ವಿತರಿಸಿದರು.
ಕ್ಷೇತ್ರಾದ್ಯಂತ ಸಮೀಕ್ಷೆ ಕಾರ್ಯ ಮುಂದುವರಿಸಿರುವ ಹೆಬ್ಬಾಳಕರ್ ಹಂತ ಹಂತವಾಗಿ ಅರ್ಹರಿಗೆ ಪೆನ್ಶನ್ ಮಂಜೂರು ಮಾಡಿಸುತ್ತಿದ್ದಾರೆ. ಕ್ಷೇತ್ರದ ಯಾರೂ ಸರಕಾರಿ ಕಚೇರಿಗಳಿಗೆ ಅಲೆದಾಡಬಾರದು ಎನ್ನುವ ಧ್ಯೇಯದೊಂದಿಗೆ ಅವರ ಮನೆ ಬಾಗಿಲಿಗೇ ಯೋಜನೆಗಳನ್ನು ತಲುಪಿಸುತ್ತಿದ್ದಾರೆ.
ಮಂಗಳವಾರ ಕ್ಷೇತ್ರದ ವಿವಿಧ ಗ್ರಾಮಗಳಿಗೆ ತೆರಳಿ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ ಹಾಗೂ ವಿವಿಧ ಮಾಸಾಶನಗಳ ಪಿಂಚಣಿ ಪತ್ರಗಳನ್ನು ಹೆಬ್ಬಾಳಕರ್ ವಿತರಿಸಿದರು.
ಹೃದಯ ಚಿಕಿತ್ಸೆಗೆ ನೆರವು
ಆರೋಗ್ಯ ಚಿಕಿತ್ಸೆಯ ವೆಚ್ಚ ಭರಿಸುವ ಸಲುವಾಗಿ ಎಪ್ಪತೈದು ಸಾವಿರ ರೂ,ಗಳ ಪರಿಹಾರದ ಚೆಕ್ ನ್ನು ಸಹ ಇದೇ ವೇಳೆ ವಿತರಣೆ ಮಾಡಲಾಯಿತು. ಮುಖ್ಯಮಂತ್ರಿಯವರ ಪರಿಹಾರ ನಿಧಿಯ ವತಿಯಿಂದ
ಬಿಜಗರಣಿ ಗ್ರಾಮದ ಬಾಳಾರಾಮ ಧಾ. ಬಿರ್ಜೆ ಇವರ ಹೃದಯ ಚಿಕಿತ್ಸೆಯ ವೆಚ್ಚ ಭರಿಸುವ ಸಲುವಾಗಿ ಚೆಕ್ ವಿತರಣೆ ಮಾಡಲಾಯಿತು.
ಮಾಜಿ ಸೈನಿಕರಿಗೆ ಸತ್ಕಾರ
ನಾಡಹಬ್ಬ ದಸರಾ ಪ್ರಯುಕ್ತ ಹಾಗೂ ಆಯುಧ ಪೂಜಾ ನಿಮಿತ್ಯ ಹಿಂಡಲಗಾ ಗ್ರಾಮದಲ್ಲಿ ಶ್ರೀ ಮಹಾಲಕ್ಷ್ಮಿ ಯಾತ್ರೋತ್ಸವ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಆಯುಧ ಪೂಜೆಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಚಾಲನೆ ನೀಡಿ, ಮಾಜಿ ಸೈನಿಕರನ್ನು ಸತ್ಕರಿಸಿದರು.
ಮುಖಂಡರಾದ ಚನ್ನರಾಜ ಹಟ್ಟಿಹೊಳಿ, ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮದ ಹಿರಿಯರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ