Kannada NewsKarnataka NewsLatest
ಹೆಣದ ಮೇಲೆ ಹಣ ಮಾಡಿ ಯಾವ ಸಾಮ್ರಾಜ್ಯ ಕಟ್ಟಲು ಹೊರಟಿದ್ದೀರಾ ಸ್ವಾಮಿ? – ಲಕ್ಷ್ಮಿ ಹೆಬ್ಬಾಳಕರ್ ಪ್ರಶ್ನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಚಾಮರಾಜ ನಗರದಲ್ಲಿ 24 ಜನರನ್ನು ಬಲಿ ತೆಗೆದುಕೊಂಡಿರುವ ಆಕ್ಸಿಜನ್ ದುರಂತದ ಹೊಣೆ ಹೊತ್ತು ಆರೋಗ್ಯ ಸಚಿವ ಡಾ.ಡಿ.ಸುಧಾಕರ ರಾಜಿನಾಮೆ ನೀಡಬೇಕು ಎಂದು ಕೆಪಿಸಿಸಿ ವಕ್ತಾರರೂ, ಶಾಸಕರೂ ಆಗಿರುವ ಲಕ್ಷ್ಮಿ ಹೆಬ್ಬಾಳಕರ್ ಆಗ್ರಹಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಆರೋಗ್ಯ ಸಚಿವ ಸುಧಾಕರ್ ಅವರೇ ಜನ ಸಾಯುತ್ತಿದ್ದರೂ ಕಮಿಷನ್ ಲೆಕ್ಕ ಹಾಕುವುದರಲ್ಲಿ ಮುಳುಗಿದ್ದೀರಾ? ಹೆಣದ ಮೇಲೆ ಹಣ ಮಾಡಿ ಯಾವ ಸಾಮ್ರಾಜ್ಯ ಕಟ್ಟಲು ಹೊರಟಿದ್ದೀರಾ ಸ್ವಾಮಿ? ಎಂದು ಪ್ರಶ್ನಿಸಿದ್ದಾರೆ.
ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಿಗೆ ಪ್ರತಿನಿತ್ಯ 70 ಟನ್ ಆಕ್ಸಿಜನ್ ಬೇಡಿಕೆ ಇದೆ.
ಆದರೆ ಕೇವಲ 20 ಟನ್ ಪೂರೈಕೆ ಮಾಡಲಾಗುತ್ತಿದೆ. ಈ ಲೋಪಗಳಿದ್ದರೂ ಆರೋಗ್ಯ ಮಂತ್ರಿಗಳು ಗಮನ ಹರಿಸದೆ ಸುಳ್ಳು ಹೇಳುತ್ತಲೇ 24 ಸಾವುಗಳಿಗೆ ಕಾರಣರಾಗಿದ್ದಾರೆ ಎಂದು ಹೆಬ್ಬಾಳಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಜನ ಕೊರೋನಾ ಸೋಂಕಿನಿಂದ ಸಾಯುತ್ತಿರುವುದಕ್ಕಿಂತ ಹೆಚ್ಚಾಗಿ ಸರ್ಕಾರ ಬೇಜವಾಬ್ದಾರಿತನದಿಂದ ಉದ್ಭವಿಸಿರುವ ಆಕ್ಸಿಜನ್, ಐಸಿಯು ಹಾಸಿಗೆ, ಔಷಧಗಳ ಪೂರೈಕೆ ಕೊರತೆಯಿಂದ ಸಾಯುತ್ತಿದ್ದಾರೆ. ಈ ಸಾವಿಗೆಲ್ಲ ಅಸಮರ್ಥ ಸರ್ಕಾರ ಹಾಗೂ ಆರೋಗ್ಯ ಸಚಿವ ಸುಧಾಕರ್ ಅವರೇ ಹೊಣೆ. ಇಷ್ಟೆಲ್ಲ ವೈಫಲ್ಯವಿದ್ದರೂ ಸಚಿವರ ತಲೆದಂಡಕ್ಕೆ ಮಿನಾಮೇಷವೇಕೆ ಎಂದು ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಪ್ರಶ್ನಿಸಿದ್ದಾರೆ.
ಕಳೆದ ವರ್ಷ ಬೆಂಗಳೂರಿನಲ್ಲಿ ಕೊರೋನಾ ಉಸ್ತುವಾರಿ ವಹಿಸಿಕೊಳ್ಳಲು ಪೈಪೋಟಿ ನಡೆಸಿದ್ದ ಅಷ್ಟದಿಗ್ಪಾಲಕ ಮಂತ್ರಿಗಳು ಈ ಬಾರಿ ಜನರ ಜೀವ ಉಳಿಸಲು ಆಕ್ಸಿಜನ್ ಪೂರೈಸಲು ಯಾಕೆ ಉತ್ಸುಕರಾಗಿಲ್ಲ? ಆರೋಗ್ಯ ಸಚಿವ ಸುಧಾಕರ್ ಅವರೇ ನಿಮ್ಮ ಕೈಯಲ್ಲಿ ಪರಿಸ್ಥಿತಿ ನಿಯಂತ್ರಣ ಸಾಧ್ಯವಾಗದಿದ್ದರೆ ರಾಜಿನಾಮೆ ಕೊಡಿ. ಜನರ ಸಾವಿನಲ್ಲಿ ಸುಳ್ಳು ಲೆಕ್ಕ ಕೊಟ್ಟು ನಿಮ್ಮ ಹುಳುಕು ಮುಚ್ಚಿಕೊಳ್ಳುವ ಬಂಡ ಬಾಳು ಬಾಳಬೇಕಾ? ನಿಮಗೆ ಕಿಂಚಿತ್ತಾದರೂ ಮನುಷ್ಯತ್ವ ಇದ್ದರೆ ನೀವು ಕೂಡಲೇ ರಾಜೀನಾಮೆ ಕೊಡಿ ಎಂದು ಲಕ್ಷ್ಮಿ ಹೆಬ್ಬಾಳಕರ್ ಒತ್ತಾಯಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ