Kannada NewsLatest

ನರೇಗಾ ಕಾರ್ಮಿಕರ ನೋವು ಆಲಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಭಾನುವಾರ ನರೇಗಾ ಕೆಲಸ ಮಾಡುತ್ತಿರುವ ಕಾರ್ಮಿಕರ ಜೊತೆ ಅವರ ಸಮಸ್ಯೆಗಳ ಕುರಿತು ಸುದೀರ್ಘ ಸಮಾಲೋಚನೆ ನಡೆಸಿದರು.

ಅವರು ಕೆಲಸ ಮಾಡುತ್ತಿರುವ ಅಂಬೇವಾಡಿ ಗ್ರಾಮಕ್ಕೇ ತೆರಳಿ ಕೆಲಸದ ಸ್ಥಳದಲ್ಲಿ ಅವರು ಅನುಭವಿಸುತ್ತಿರುವ ಸಂಕಷ್ಟ, ಕೌಟುಂಬಿಕವಾಗಿ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ವಿಚಾರಿಸಿದರು.
ಕುಟುಂಬದ ಆರೋಗ್ಯ, ಮಕ್ಕಳ ವಿದ್ಯಾಭ್ಯಾಸ, ಸಾಮಾಜಿಕ ಸ್ಥಿತಿಗತಿ ಮೊದಲಾದವುಗಳನ್ನು ತಿಳಿದು, ಹಲವಾರು ರೀತಿಯ ಸಲಹೆ, ಪರಿಹಾರಗಳನ್ನು ನೀಡಿದರು. 
   ಇಲ್ಲಿಯ ಮಹಿಳೆಯರು ಗಂಡಸರಿಗಿಂತ ನಾವೇನು ಕಡಿಮೆ ಇಲ್ಲ ಎನ್ನುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕುಟುಂಬ ನಿರ್ವಹಣೆಯಲ್ಲಿ ತಾವೂ ಕೊಡುಗೆ ನೀಡುತ್ತಿದ್ದಾರೆ ಎಂದ ಹೆಬ್ಬಾಳಕರ್, ಸಂಬಂಧಿಸಿದ ಅಧಿಕಾರಿಗಳು, ಸಮಸ್ಯೆಗಳ ಕುರಿತು ಸ್ಪಂದಿಸುತ್ತಿದ್ದಾರಾ, ಆರೋಗ್ಯ ಸಮಸ್ಯೆಗೆ ಕಾಳಜಿ ತೆಗೆದುಕೊಳ್ಳುತ್ತಿದ್ದಾರಾ ಎಂದು ವಿಚಾರಿಸಿದರು. ಕೆಲಸ ಮಾಡುವ ಸ್ಥಳದಲ್ಲಿ ಕುಡಿಯಲು ನೀರು, ಸರಿಯಾದ ಸಮಯಕ್ಕೆ ವೇತನ ಬಿಡುಗಡೆ ಬಗ್ಗೆ ಸಹ ವಿಚಾರಿಸಿದರು.
ಕೆಲವರು ಸಣ್ಣ ಪುಟ್ಟ ಸಮಸ್ಯೆ ಹೇಳಿಕೊಂಡರೂ ಹೆಚ್ಚಿನವರು ನರೇಗಾ ಯೋಜನೆ ಉಪಯುಕ್ತವಾಗಿದೆ. ಇದರಿಂದ ತಮ್ಮ ಕುಟುಂಬ ನಿರ್ವಹಣೆಗೆ ಅನುಕೂಲವಾಗಿದೆ ಎಂದು ತಿಳಿಸಿದರು.
ಮಕ್ಕಳ ಶಿಕ್ಷಣ ಹಾಗೂ ಕುಟುಂಬದ ಆರೋಗ್ಯದ ಕಡೆಗೆ ಗಮನ ನೀಡುವಂತೆ ಹೆಬ್ಬಾಳಕರ್ ಸಲಹೆ ನೀಡಿದರು.
ಭಾನುವಾರವೂ ಸಹ ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಎಲ್ಲ ಮಾಹಿತಿಗಳನ್ನು ನೀಡಿದ್ದಕ್ಕಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಧನ್ಯವಾದ ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button