ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಬೆಳಗಾವಿ ಗ್ರಾಮೀಣ ಕ್ಷೇತ್ರದ ಗೋಜಗಾ ಗ್ರಾಮದಲ್ಲಿ ನರೇಗಾ ಯೋಜನೆಯಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಭೇಟಿ ಮಾಡಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಪರಿಸರ ಕಾಳಜಿ ಮತ್ತು ಮಾನವೀಯತೆ ಮೆರೆದರು.
ಕಾರ್ಮಿಕರ ಯೋಗಕ್ಷೇಮವ ವಿಚಾರಿಸಿದ ಹೆಬ್ಬಾಳಕರ್, ಅಂಬೇವಾಡಿಯ ಒಬ್ಬ ಹೆಣ್ಣು ಮಗಳಿಗೆ ಬಲಗೈಗೆ ನಂಜಾಗಿದ್ದು ಆ ಹೆಣ್ಣು ಮಗಳನ್ನು ಸಿವಿಲ್ ಆಸ್ಪತ್ರೆಗೆ ಕಳುಹಿಸಿ ಶಸ್ತ್ರ ಚಿಕಿತ್ಸೆ ಮಾಡಿಸಿದರು.
ಅಲ್ಲದೆ, ಒಬ್ಬ ಕಾರ್ಮಿಕನಿಗೆ ಕಾಲಿನ ಮೇಲೆ ಕಲ್ಲು ಬಿದ್ದು ಪೆಟ್ಟಾಗಿದ್ದನ್ನು ಗಮನಿಸಿ, ಅವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರದ ಭರವಸೆ ನೀಡಿದ್ದಲ್ಲದೆ, ಕಾನೂನಿನ ಅಡಿ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು..
ಈ ಸಂದರ್ಭದಲ್ಲಿ ಕಾರ್ಮಿಕರು ಕುಡಿಯುವ ನೀರಿನ ಸಮಸ್ಯೆ ಹೇಳಿಕೊಂಡರು. ಅವರಿಗೆ ಸೂಕ್ತ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಲ್ಲದೆ, ಈಗ ನನ್ನ ಬಳಿ ನೀರಿನ ಸಮಸ್ಯೆ ಹೇಳಿಕೊಂಡಿದ್ದೀರಿ, ಮುಂದಿನ ಪೀಳಿಗೆ, ನಿಮ್ಮ ಮೊಮ್ಮಕ್ಕಳು ನೀರಿಗಾಗಿ ಯಾರ ಮನೆಯ ಬಾಗಿಲಿಗೆ ಹೋಗಿ ಕೇಳಬೇಕು ಎಂದು ಪ್ರಶ್ನಿಸಿದರು.
ಮುಂದಿನ ಸಲ ನಾನು ಬರುವಾಗ ಎಲ್ಲರಿಗೂ ತಲಾ ಎರಡು ಗಿಡಗಳನ್ನು ತಂದು ಕೊಡುತ್ತೇನೆ. ಒಟ್ಟು 9 ಸಾವಿರ ಕಾರ್ಮಿಕರಿದ್ದೀರಿ. ಪ್ರತಿಯೊಬ್ಬರೂ ಎರಡು ಗಿಡಗಳಂತೆ ಒಟ್ಟು 18 ಸಾವಿರ ಗಿಡಗಳನ್ನು ನೆಡಬೇಕು ಎಂದು ಕರೆ ನೀಡಿದರು.
ಮುಂದೆ ಬರುವ ಕೆಟ್ಟ ಬರ ಕ್ಷಾಮಕ್ಕೆ ಅವಕಾಶವನ್ನು ಕೊಡದೇ ಇಂದೇ ಎಚ್ಚೆತ್ತುಕೊಳ್ಳೋಣ ಎಂದು ಹೇಳಿದಾಗ ಎಲ್ಲ ಕಾರ್ಮಿಕರು ಬಹಳ ಪ್ರೀತಿಯಿಂದ ಗಿಡಗಳನ್ನು ಕಳುಹಿಸಿ ಕೊಡಿ ಎಂದರು.