ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – 35 ವರ್ಷಗಳಿಂದ ರಸ್ತೆ ದುರಸ್ತಿಯಿಲ್ಲದೆ ಜನ ಪರಿತಪಿಸುತ್ತಿದ್ದ ಗ್ರಾಮೀಣ ವಿಧಾನ ಸಭಾ ಕ್ಷೇತ್ರದಲ್ಲಿ ಸುಮಾರು 23 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಸೋಮವಾರ ಚಾಲನೆ ನೀಡಿದರು.
ಸತತ ಪ್ರಯತ್ನದಿಂದಾಗಿ ಲೋಕೋಪಯೋಗಿ ಇಲಾಖೆಯಿಂದ ರಸ್ತೆ ಕಾಮಗಾರಿಯನ್ನು ಶಾಸಕರು ಮಂಜೂರು ಮಾಡಿಸಿಕೊಂಡು ಬಂದಿದ್ದಾರೆ. ಉಚಗಾಂವ, ಮಣ್ಣೂರು ಹಾಗೂ ಗೋಜಗಾ ಗ್ರಾಮಗಳಲ್ಲಿ ರಸ್ತೆಯ ಡಾಂಬರೀಕರಣ ನಡೆಯಲಿದೆ. ಗ್ರಾಮೀಣ ಕ್ಷೇತ್ರದ ಮಟ್ಟಿಗೆ ಇದೊಂದು ದಾಖಲೆಯೇ ಸರಿ.
35 ವರ್ಷಗಳ ಹಿಂದೆ ಈ ರಸ್ತೆಗಳ ಕಾಮಗಾರಿಯನ್ನು ನಡೆಸಲಾಗಿತ್ತಾದರೂ ತೀರಾ ಕಳಪೆ ಗುಣಮಟ್ಟದ ವಸ್ತುಗಳಿಂದ ನಿರ್ಮಾಣಗೊಂಡಿದ್ದರಿಂದ ಬಹುಬೇಗ ಹಾಳಾಗಿತ್ತು. ಇದರಿಂದಾಗಿ ನಿತ್ಯ ಸಾವಿರಾರು ಜನರು ಸುಗಮ ಸಂಚಾರ ಸಾಧ್ಯವಿಲ್ಲದೆ ಪರದಾಡುತ್ತಿದ್ದರು.
ಅಲ್ಲಿನ ಜನರು ಹೇಳುವ ಪ್ರಕಾರ ಕಳೆದ 15-20 ವರ್ಷಗಳಿಂದ ಯಾವ ಜನ ಪ್ರತಿನಿಧಿಯೂ ಇತ್ತ ಮುಖ ಹಾಕಿರಲಿಲ್ಲ. ಗ್ರಾಮಸ್ಥರ ಮನವಿ ಮೇರೆಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಪ್ರಯತ್ನ ಮಾಡಿ ದೊಡ್ಡ ಮೊತ್ತದ ಕಾಮಗಾರಿ ಮಂಜೂರು ಮಾಡಿಸಿಕೊಂಡು ಬಂದಿದ್ದಾರೆ.
ಹಿಂಡಲಗಾ-ಮಣ್ಣೂರ-ಗೋಜಗಾ-ಉಚಗಾಂವ-ಬಸುರ್ತೆ ಕ್ರಾಸ್ ಈ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಒಟ್ಟು ಹತ್ತು ಕಿಲೋಮೀಟರ್ ಕಾಮಗಾರಿ, ಬೊಕನೂರ ಕ್ರಾಸ್ -ಬೆಳಗುಂದಿ-ಸೋನೊಲಿ-ಎಳೆಬೈಲ್-ರಾಕ್ಕಸಕೊಪ್ಪ-ತುಡಯೆ ಕಾರ್ನರ್ (ಕರ್ನಾಟಕ ಮಹಾರಾಷ್ಟ್ರ ಗಡಿ) ಈ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಒಟ್ಟು ಎಂಟು ಕಿಲೋಮೀಟರ್ ಕಾಮಗಾರಿ ಇದಾಗಿದೆ.
ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ನಿಗದಿತ ಸಮಯದಲ್ಲಿ ಸುಸಜ್ಜಿತ ರಸ್ತೆ ನಿರ್ಮಾಣ ಮಾಡಬೇಕು ಎಂದು ಹೆಬ್ಬಾಳಕರ್ ಗುತ್ತಿಗೆದಾರರಿಗೆ ಸೂಚಿಸಿದರು. ಇಷ್ಟು ದೊಡ್ಡ ಮೊತ್ತದಲ್ಲಿ ರಸ್ತೆ ನಿರ್ಮಾಣ ಮಾಡುತ್ತಿರುವುದಕ್ಕೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ, ಶಾಸಕರಿಗೆ ಕೃತಜ್ಞತೆ ವ್ಯಕ್ತಪಡಿಸಿದರು.
ನಾನು ಅಭಿವೃದ್ಧಿ ಕಾಮಗಾರಿಯಲ್ಲಿ ಯಾವುದೇ ರಾಜಕಾರಣ ಮಾಡುವುದಿಲ್ಲ. ಚುನಾವಣೆಯಲ್ಲಿ ಆಯ್ಕೆಯಾದ ನಂತರ ನನ್ನ ಗುರಿ ಏನಿದ್ದರೂ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ. ಚುನಾವಣೆ ಬಂದಾಗ ರಾಜಕೀಯ ನೋಡಿಕೊಳ್ಳೋಣ. ಜನರು ಕೂಡ ಒಗ್ಗಟ್ಟಿನಿಂದ ನಿಮ್ಮ ನಿಮ್ಮ ಭಾಗದ ಅಭಿವೃದ್ಧಿಯ ಕಡೆ ಗಮನ ಕೊಡಬೇಕು. ಎಲ್ಲರೂ ಸೇರಿ ಕ್ಷೇತ್ರವನ್ನು ಮಾದರಿ ಮಾಡೋಣ ಎಂದು ಲಕ್ಷ್ಮಿ ಹೆಬ್ಬಾಳಕರ್ ವಿನಂತಿಸಿದರು.
ಹಿಂದಿನ ಶಾಸಕರು ಏನು ಮಾಡಿದರು, ಏನು ಮಾಡಿಲ್ಲ ಎನ್ನುವುದನ್ನು ನಾನು ಕೆದಕುವುದಿಲ್ಲ. ಅದೆಲ್ಲ ನಿಮ್ಮ ಮುಂದೆಯೇ ಇದೆ. ನಾನು ನನ್ನ ಕೆಲಸವನ್ನಷ್ಟೆ ಮಾಡುತ್ತೇನೆ. ಕ್ಷೇತ್ರದ ಜನರು ಬುದ್ದಿವಂತರಿದ್ದೀರಿ. ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತೀರಿ. ಅಭಿವೃದ್ಧಿಗೆ ಸಹಕಾರ ನೀಡಿ ಎಂದಷ್ಟೇ ನಾನು ಮನವಿ ಮಾಡಿಕೊಳ್ಳುತ್ತೇನೆ ಎಂದು ಶಾಸಕರು ಹೇಳಿದರು.
ಗ್ರಾಮಸ್ಥರು, ಸ್ಥಳೀಯ ಜನಪ್ರತಿನಿಧಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.