ಸಂಪುಟ ವಿಸ್ತರಣೆಗೆ ನಾವ್ಯಾರೂ ಗಡಿಬಿಡಿ ಮಾಡಿಲ್ಲ ಎಂದ ಮಹೆಶ್ ಕುಮಟಳ್ಳಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಿಎಂ ಯಡಿಯೂರಪ್ಪ ನನಗೂ ಕೂಡ ಮಾತುಕೊಟ್ಟಿದ್ದಾರೆ. ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ಒಂದು ವೇಳೆ ಮಂತ್ರಿ ಸ್ಥಾನ ಸಿಗದಿದ್ದರೆ ಶಾಸಕನಾಗಿ ಕೆಲಸ ಮುಂದುವರೆಸುತ್ತೇನೆ ಎಂದು ಅಥಣಿ ಶಾಸಕ ಮಹೇಶ್​ ಕುಮಟಳ್ಳಿ ಹೇಳಿದ್ದಾರೆ.

ಸಂಪುಟ ವಿಸ್ತರಣೆ ವಿಚಾರವಾಗಿ ವರಿಷ್ಠರೊಂದಿಗೆ ಚರ್ಚಿಸಲು ಸಿಎಂ ಬಿ ಎಸ್ ಯಡಿಯೂರಪ್ಪ ದೆಹಲಿಗೆ ತೆರಳಿದ ಬೆನ್ನಲ್ಲೇ ಸಚಿವಾಕಾಂಕ್ಷಿಗಳು ಹಲವು ನಿರೀಕ್ಷೆಯಲ್ಲಿದ್ದು, ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಮಹೇಶ್ ಕುಮಟಳ್ಳಿ, ಬಿಜೆಪಿ ವರಿಷ್ಠರು ಸರಿಯಾದ ಸಮಯದಲ್ಲಿ ಯಾರಿಗೆ ಯಾವ ಸ್ಥಾನ ನೀಡಬೇಕೆಂದು ನಿರ್ಧರಿಸುತ್ತಾರೆ. ವರಿಷ್ಠರು ಏನೇ ನಿರ್ಧಾರ ಕೈಗೊಂಡರೂ ನಾವು ಬದ್ಧರು. ನಾವ್ಯಾರೂ ಸಂಪುಟ ವಿಸ್ತರಣೆ ಬಗ್ಗೆ ಗಡಿಬಿಡಿ ಮಾಡಿಲ್ಲ ಎಂದರು.

ಮೂಲ ಬಿಜೆಪಿಯವರು, ನೂತನ ಶಾಸಕರು ಎಂಬ ಯಾವುದೇ ವ್ಯತ್ಯಾಸವಿಲ್ಲ. ಅವರೆಲ್ಲರೂ ಬಿಜೆಪಿಗೆ ಸೇರಿದ ಮೇಲೆ ನಾವೆಲ್ಲರೂ ಬಿಜೆಪಿಯವರೇ ಎಲ್ಲರೂ ಒಟ್ಟಾಗಿದ್ದೇವೆ. ಸಿಎಂ ಯಡಿಯೂರಪ್ಪ ನನಗೂ ಕೂಡ ಮಾತುಕೊಟ್ಟಿದ್ದರು. ಸಚಿವ ಸ್ಥಾನ ನೀಡಿದರೆ ಸಂತೋಷದಿಂದ ಕೆಲಸ ಮಾಡುತ್ತೇನೆ. ಯಾವ ಖಾತೆ ಕೊಟ್ಟರೂ ಸಾಮರ್ಥ್ಯ ಮೀರಿ ಕೆಲಸ ನಿರ್ವಹಿಸುತ್ತೇನೆ. ಒಂದು ವೇಳೆ ಸಚಿವ ಸ್ಥಾನ ಸಿಗದಿದ್ರೆ ಶಾಸಕನಾಗಿ ಕೆಲಸ ಮುಂದುವರೆಸುತ್ತೇನೆ ಎಂದಿದ್ದಾರೆ.

ಇದೇ ವೇಳೆ ಸೋತವರಿಗೆ ಸಚಿವ‌ ಸ್ಥಾನ ವಿಚಾರ ಕುರಿತು ಮಾತನಾಡಿದ ಅವರು, ಹೆಚ್ ವಿಶ್ವನಾಥ್ ಅವರಿಗೆ ಜನಾದೇಶ ಸಿಗಲಿಲ್ಲ. ಆದರೆ, ಅವರಿಗೆ ಸೂಕ್ತ ಸ್ಥಾನ ಕೊಡುವ ಭರವಸೆ ಇದೆ. ನಮ್ಮ ಜೊತೆಯೇ ಸಚಿವನನ್ನಾಗಿ ಮಾಡಲಿ ಎಂಬ ಆಸೆ ಇದೆ. ನಾವು ಯಾರೂ ಸಿಎಂ ಮೇಲೆ ಮುನಿಸಿಕೊಂಡಿಲ್ಲ. ವರಿಷ್ಠರ ನಿರ್ಧಾರಕ್ಕೆ ಬದ್ಧ ಎದು ಹೇಳಿದರು.

ರಮೇಶ್ ಜಾರಕಿಹೊಳಿಗೆ ಡಿಸಿಎಂ ಸ್ಥಾನ ವಿಚಾರ ಕುರಿತು ಮಾತನಾಡಿದ ಅವರು, ಬೆಳಗಾವಿಗೆ ಮತ್ತೊಂದು ಉಪಮುಖ್ಯಮಂತ್ರಿ ಸ್ಥಾನ ನೀಡಿದರೆ ಒಳ್ಳೆಯದು. ರಮೇಶ್ ಜಾರಕಿಹೊಳಿಯವರಿಗೆ ಡಿಸಿಎಂ ಕೊಡಬೇಕು ಅನ್ನೋದು ನಮ್ಮ ಆಗ್ರಹವೂ ಇದೆ. ಈಗಾಗಲೇ ಸವದಿಯವರು ಬೆಳಗಾವಿಯಿಂದ ಡಿಸಿಎಂ ಆಗಿದ್ದಾರೆ. ಒಂದೇ ಜಿಲ್ಲೆಯಿಂದ ಇಬ್ಬರು ಡಿಸಿಎಂ ಆಗಿ ಕೆಲಸ ಮಾಡುವುದು ಇತಿಹಾಸವಾಗಲಿದೆ ಎಂದು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button