Belagavi NewsBelgaum NewsKannada NewsKarnataka NewsNationalPolitics

*ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ ಶಾಸಕ ರಮೇಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಕಳೆದ ಕೆಲವು ದಿನಗಳಿಂದ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾಗುತ್ತಿವೆ. ಅವುಗಳಿಗೆ ವೇಗ ನೀಡುವ ಕೆಲಸ ಅಧಿಕಾರಿಗಳು ಮಾಡಬೇಕು. ಸಾರ್ವಜನಿಕರಿಂದ ಹಣ ಪಡೆದು ಸರಕಾರಿ ಸೇವೆ ನೀಡುವ ದೂರುಗಳು ಬರುತ್ತಿವೆ. ಅಂತಹ ಅಧಿಕಾರಿಗಳನ್ನು ಗುರುತಿಸಿ ಕ್ರಮಕೈಗೊಳ್ಳುತ್ತೇವೆ ಎಂದು ಶಾಸಕ ರಮೇಶ ಜಾರಕಿಹೊಳಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಗೋಕಾಕ ಪಟ್ಟಣದ ತಾಪಂ ಸಭಾ ಭವನದಲ್ಲಿ ಜರುಗಿದ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರಕಾರದಿಂದ ಬರುವ ಯೋಜನೆಗಳನ್ನು ಪಡೆಯಲು ಬರುವ ಜನರಿಂದ ಹಣ ವಸೂಲಿ ಮಾಡುವದು, ಕಚೇರಿಯಲ್ಲಿ ಸರಿಯಾಗಿ ಕಾರ್ಯನಿರ್ವಹಿಸದೇ ಇರುವ ದೂರುಗಳು ಬಂದಿವೆ ಅಂತಹ ಅಧಿಕಾರಿಗಳನ್ನು ಕಾನೂನು ಶಿಕ್ಷೆಗೆ ಒಳಪಡಿಸಿ ಎಂದರು.

ಜನಸ್ನೇಹಿ ಆಡಳಿತ ನೀಡದವರು ನಮ್ಮ ತಾಲೂಕಿಗೆ ಅವಶ್ಯಕತೆ ಇಲ್ಲ. ಸ್ವತಃ ತಾವೇ ಬೇರೆಡೆಗೆ ವರ್ಗಾವಣೆ ಪಡೆದು ಹೋಗಬಹುದು. ತಾಲೂಕಿನ ಜನರ ಸೇವೆ ಮಾಡುವವರು ಮಾತ್ರ ಇಲ್ಲಿ ಇರಬೇಕು. ಇಲ್ಲವಾದರೆ ಕಠೀಣ ಕ್ರಮಕೈಗೊಳ್ಳಲಾಗುವದು. ನಗರದ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಸಿಬ್ಬಂಧಿಯ ಕೊರತೆ ಇದೆ ಅದನ್ನು ಸರಕಾರದ ಗಮನಕ್ಕೆ ತಂದು ಹೆಚ್ಚಿನ ಸಿಬ್ಬಂಧಿ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಹೇರಿಗೆಗೆ ಬರುವ ಗರ್ಭಿಣಿ ಮಹಿಳೆಯರಿಗೆ ರಾತ್ರಿ ಸಮಯದಲ್ಲಿ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ. ಅಲ್ಲದೇ ಕರ್ತವ್ಯದಲ್ಲಿರುವ ವೈದ್ಯರಿಗೂ ತಿಳಿಸದೆ ಸಿಬ್ಬಂದಿ ಕಮಿಷನ್ ಆಸೆಗೆ ಖಾಸಗಿ ಆಸ್ಪತ್ರೆಗೆ ಕಳುಹಿಸುತ್ತಿರುವದು ಗಮನಕ್ಕೆ ಬಂದಿದೆ ಅಂತವರ ವಿರುದ್ಧ ಸೂಕ್ತಕ್ರಮ ವಹಿಸಲಾಗುವದು ಎಂದರು.

ರಾಜ್ಯದಲ್ಲಿ ಡೆಂಘಿ ಜ್ವರ ಸದ್ದು ಮಾಡುತ್ತಿದ್ದು ಆರೋಗ್ಯ ಇಲಾಖೆ ಮತ್ತು ಸ್ಥಳೀಯ ಸಂಸ್ಥೆಗಳು ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಿ, ಮಳೆಯ ಪ್ರಮಾಣ ಹೆಚ್ಚಿರುವದರಿಂದ ಪ್ರವಾಹದ ಬಗ್ಗೆ ಮತ್ತು ರೋಗರುಜಿನಿಗಳು ಹರಡದಂತೆ ಸೂಕ್ತಕ್ರಮಕೈಗೊಳ್ಳಬೇಕು. ನಗರಸಭೆ ಪಟ್ಟಣ ಪಂಚಾಯತಗಳಲ್ಲಿ ಮನೆಗಳ ಉತಾರ ಪಡೆಯಲು ಬೇಕಾಬಿಟ್ಟಿಯಾಗಿ ಹಣ ವಸೂಲಿ ಮಾಡಲಾಗುತ್ತಿದೆ ಅಂತವರನ್ನು ಕೂಡಲೇ ಸಸ್ಪೆಂಡ್ ಮಾಡುವಂತೆ ಮೇಲಾಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನ ಕೆಲವು ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯರು ಸರಿಯಾಗಿ ಶಾಲೆಗೆ ಬಾರದಿರುವದು ಮತ್ತು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ವಿಫಲರಾಗುತ್ತಿದ್ದಾರೆ ಅಂತವರ ವಿರುದ್ಧ ಶಿಸ್ತುಕ್ರಮ ಜರುಗಿಸಿ. ಅಂಬೇಡ್ಕರ ವಸತಿ ಶಾಲೆಯಲ್ಲಿಯೂ ಸಹ ಗುಣಮಟ್ಟದ ಶಿಕ್ಷಣ, ಆಹಾರ ಒದಗಿಸುತ್ತಿಲ್ಲ ಎಂಬ ದೂರು ಬಂದಿದ್ದು ಸೂಕ್ತಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.

ತಾಲೂಕಿನಲ್ಲಿ ಉತ್ತಮವಾದ ಮಳೆಯಾಗುತ್ತಿದ್ದು ರೈತರಿಗೆ ಸರಿಯಾದ ಸಮಯಕ್ಕೆ ಕೃಷಿ, ತೋಟಗಾರಿಕೆ ಇಲಾಖೆಯಿಂದ ಸರಕಾರದ ಸವಲತ್ತು ಸೀಗುವಂತಾಗಬೇಕು. ತಾಲೂಕಿನಲ್ಲಿ ರೈತರಿಗೆ ಕೃಷಿ ಇಲಾಖೆಯಿಂದ ಬರುವ ಯೋಜನೆಗಳ ಬಗ್ಗೆ ಮಾಹಿತಿ ಇಲ್ಲ. ಅಲ್ಲದೇ ಅದರ ಬಗ್ಗೆ ಪ್ರಚಾರವು ಸಹ ಆಗುತ್ತಿಲ್ಲ. ಅಧಿಕಾರಿಗಳು ರೈತರೊಂದಿಗೆ ಸೌಜನ್ಯಯುತವಾಗಿ ವರ್ತಿಸಿ ಸರಕಾರದ ಯೋಜನೆಗಳನ್ನು ತಿಳಿಸಿ, ಯೋಜನೆಯ ಸದ್ಬಳಕೆಮಾಡಿಕೊಳ್ಳಲು ಸಹಕಾರ ನೀಡಬೇಕು. ಕೃಷಿ ಇಲಾಖೆಯಲ್ಲಿ ಕೃಷಿ ಪರಿಕರಗಳ ವಿತರಣೆ ಅರ್ಹ ಫಲಾನುಭವಿಗಳಿಗೆ ಸೇರುತ್ತಿಲ್ಲ. ಕೃಷಿ ಇಲಾಖೆಯಲ್ಲಿ ಏಜೆಂಟರ ಹಾವಳಿ ಹೆಚ್ಚಾಗಿದೆ ಅಂತವರ ಬಗ್ಗೆ ಕ್ರಮಕೈಗೊಳ್ಳುವಂತೆ ತಿಳಿಸಿದರು.

ಮಳೆಗಾಲ ಇರುವದರಿಂದ ಕಾಲುವೆಗಳ ಸ್ವಚ್ಛತೆಗೆ ಕ್ರಮವಹಿಸಿ, ರೈತರಿಗೆ ಕಾಲುವೆ ನೀರು ಸರಿಯಾಗಿ ಹೋಗುವಂತೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಹೆಸ್ಕಾಂನಿಂದ ರೈತರಿಗೆ ವಿದ್ಯುತ್ ಕಂಬ, ಟಿಸಿ ಸೇರಿದಂತೆ ರೈತರಿಗೆ ಅವಶ್ಯಕವಿರುವ ಸೇವೆಗಳನ್ನು ಸರಿಯಾಗಿ ಒದಗಿಸಬೇಕೆಂದು ಹೇಳಿದರು.

ಸಭೆಯಲ್ಲಿ ತಹಶೀಲದಾರ ಡಾ.ಮೋಹನ ಭಸ್ಮೆ, ಜಿಪಂ ಕಾರ್ಯನಿರ್ವಾಹಕ ಅಧಿಕಾರಿ ಉದಯ ಕಾಂಬಳೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button