‘ಕೈ’ ಮುಖಂಡ ಗೋಪಾಲಕೃಷ್ಣ ಸುಪಾರಿ ಕೊಟ್ಟಿದ್ದು ಬಯಲಾಗಿದೆ; ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲಿ; ಎಸ್.ಆರ್.ವಿಶ್ವನಾಥ್ ಒತ್ತಾಯ
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಚುನಾವಣೆಗಳಲ್ಲಿ ಸೋಲು-ಗೆಲುವು ಸಹಜ. ಆದರೆ ಓರ್ವ ಶಾಸಕನ ಹತ್ಯೆಗೆ ಸಂಚು ರೂಪಿಸುವಂತಹ ದ್ವೇಷದ ರಾಜಕಾರಣ ಇದುವರೆಗೂ ನಡೆದಿರಲಿಲ್ಲ. ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನನ್ನ ಹತ್ಯೆಗೆ ಸುಪಾರಿ ಕೊಟ್ಟಿದ್ದರು ಎಂಬುದು ಬಯಲಾಗಿದೆ. ಈ ಬಗ್ಗೆ ಕೂಲಂಕುಷ ತನಿಖೆ ನಡೆಯಬೇಕು ಎಂದು ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಒತ್ತಾಯಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್.ಆರ್.ವಿಶ್ವನಾಥ್, ನಾನು ಯಾವತ್ತೂ ಏಕಾಂಗಿಯಾಗಿ ಓಡಾಡುತ್ತೇನೆ. ತೋಟದ ಮನೆಗೆ ಹೋಗುವಾಗವಾಗಲಿ, ಕ್ಷೇತ್ರದಲ್ಲಿಯೇ ಅಗಲಿ ನನ್ನ ಜೊತೆ ಒಬ್ಬ ಗನ್ ಮ್ಯಾನ್ ಬಿಟ್ಟರೆ ಬೇರೆ ಯಾರೂ ಇರುವುದಿಲ್ಲ. ನನ್ನ ವಿರುದ್ಧ ಕೆಟ್ಟ ಸಂಚು ನಡೆಯುತ್ತಿದೆ ಎಂಬ ಬಗ್ಗೆ 15 ದಿನಗಳ ಹಿಂದೆ ಸಣ್ಣದೊಂದು ಗುಮಾನಿ ಇತ್ತು. ಆದರೆ ಅದನ್ನು ನಾನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ನಿನ್ನೆ ಕುಳ್ಳ ದೇವರಾಜ್ ಕ್ಷಮಾಪಣೆ ಪತ್ರ ಕಳುಹಿಸಿದಾಗಲೇ ನನಗೆ ಗೊತ್ತಾಗಿದ್ದು ಎಂದು ಹೇಳಿದ್ದಾರೆ.
ಗೋಪಾಲಕೃಷ್ಣ ನನ್ನ ಹತ್ಯೆಗೆ ಸುಪಾರಿ ಕೊಟ್ಟಿದ್ದರು ಎಂಬುದು ವಿಡಿಯೋ ಮೂಲಕವೂ ಬಯಲಾಗಿದೆ. ಅಲ್ಲದೇ ಸುಪಾರಿ ಪಡೆದಿದ್ದ ಕುಳ್ಳ ದೇವರಾಜ್ ಕ್ಷಮಾಪಣೆ ಪತ್ರ ಬರೆದು ಗೋಪಾಲಕೃಷ್ಣ ಎಂಬುವವರು ಸುಪಾರಿ ಕೊಟ್ಟಿದ್ದರು ಎಂದು ಉಲ್ಲೇಖಿಸಿದ್ದಾನೆ. ತನ್ನನ್ನು ಕ್ಷಮಿಸಿ ಎಂದು ಕೇಳಿದ್ದಾನೆ. ಬೇರೆಯವರ ಮೂಲಕ ಪತ್ರ ರವಾನಿಸಿದ್ದಾನೆ. ನಿನ್ನೆ ಸಂಜೆ ನನ್ನ ಮನೆಗೆ ಕವರ್ ಒಂದು ಬಂದಿತ್ತು. ಅದನ್ನು ಪರಿಶೀಲಿಸಿದಾಗ ವಿಷಯಗೊತ್ತಾಗಿದೆ. ತಕ್ಷಣ ಗೃಹ ಸಚಿವರಿಗೆ ಕರೆ ಮಾಡಿ ಈ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದ್ದೇನೆ ಎಂದರು.
ಗೋಪಾಲಕೃಷ್ಣರನ್ನು ನಾನು ಯಾವತ್ತೂ ಎದುರಾಳಿ ಎಂದು ಭಾವಿಸಿಲ್ಲ. ರಾಜಕಿಯವಾಗಿ ಜಿದ್ದಿಗೆ ಬರಲಿ ಎದುರಿಸುತ್ತೇನೆ. ಆದರೆ ಈರೀತಿ ಸುಪಾರಿ ಕೊಟ್ಟು ಹತ್ಯೆ ಮಾಡುವ ಮಟ್ಟಕ್ಕೆ ಬಂದಿರುವುದು ರಾಜಕೀಯ ದ್ವೇಷಕ್ಕೆ ಸಾಕ್ಷಿ. ಅಂತಹ ದ್ವೇಷದ ಹಗೆ ನನ್ನ ಮೇಲೆ ಯಾಕೆ ಎಂಬುದು ತಿಳಿಯುತ್ತಿಲ್ಲ. ನನ್ನ ವಿರುದ್ಧ ಮೂರು ಬಾರಿ ಸ್ಪರ್ಧಿಸಿ ತೀತಿದ್ದರು. ನಾನೇ ಅವರನ್ನು ಎಪಿಎಂಸಿ ಅಧ್ಯಕ್ಷರನ್ನಾಗಿಯೂ ಮಾಡಿದ್ದೆ. ಇಂಥಹ ದ್ವೇಷದ ರಾಜಕಾರಣ ಸಹಿಸಲ್ಲ ಎಂದು ಗುಡುಗಿದರು.
ಓರ್ವ ಶಾಸಕನ ಹತ್ಯೆಗೆ ಸಂಚು ಮಾಡುತ್ತಾರೆ ಎಂದರೆ ಏನರ್ಥ? ನನ್ನ ಕ್ಷೇತ್ರದ ಜನರು ಕೂಡ ಶಾಕ್ ಆಗಿದ್ದಾರೆ. ವಿಪಕ್ಷ ನಾಯಕರಲ್ಲಿ ಮನವಿ ಮಾಡುತ್ತೇನೆ ಇಂಥವರನ್ನು ಸಮರ್ಥಿಸಿಕೊಳ್ಳುವುದು ಸರಿಯಲ್ಲ. ತನಿಖೆಗೆ ಆಗ್ರಹಿಸಲಿ ಎಂದರು.
ಗೋಪಾಲಕೃಷ್ಣ ನನ್ನನ್ನು ಮುಗಿಸುವಂತೆ ಹಲವು ಬಾರಿ ಹೇಳಿರುವುದು ಬಹಿರಂಗವಾಗಿದೆ. ಆಂಧ್ರ ಮೂಲದ ಶಾರ್ಪ್ ಶೂಟರ್ ಗಳನ್ನು ಕರೆಸಿ ಹತ್ಯೆ ಮಾಡುವಂತೆಯೂ ಸೂಚಿಸಿದ್ದಾರೆ. ಕೆಲ ದಿನಗಳ ಹಿಂದೆ ಯಲಹಂಕದ ಶ್ರೇಯಸ್ ಹೋಟೆಲ್ ನಲ್ಲಿ ರೂಮ್ ಬುಕ್ ಮಾಡಿ ಹಂತಕರನ್ನು ಇರಿಸಿದ್ದಾಗಿ ಹಾಗೂ ಸ್ವತ: ಗೋಪಾಲಕೃಷ್ಣ ಅವರೊಂದಿಗೆ ಮಾತನಾಡಿದ್ದಾಗಿ ನನಗೆ ಮಾಹಿತಿ ಬಂದಿತ್ತು. ಇಂಥ ಬೆದರಿಕೆಗೆ ನಾನು ಹೆದರುವುದಿಲ್ಲ. ನನ್ನ ಹತ್ಯೆಗೆ ಸಂಚು ರೂಪಿಸಿರುವ ಬಗ್ಗೆ ರಾಜಾನುಕುಂಟೆ ಪೊಲೀಸರಿಗೆ ದೂರು ನೀಡಿದ್ದೇನೆ. ಪ್ರಕರಣದ ಬಗ್ಗೆ ಕೂಲಂಕುಷ ತನಿಖೆ ನಡೆಯಲಿ. ನಿಧಾನವಾಗಿಯಾದರೂ ಪರವಾಗಿಲ್ಲ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು.
ತೋಟದ ಮನೆಯಲ್ಲೇ ಎಸ್.ಆರ್.ವಿಶ್ವನಾಥ್ ಹತ್ಯೆಗೆ ಸ್ಕೆಚ್; ಸಂಚುಕೋರರ ಸ್ಫೋಟಕ ಸಂಭಾಷಣೆ ಬಹಿರಂಗ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ