*ಅಕ್ರಮ ತಡೆಯಲು ಹೋದ ಮಹಿಳಾ ಅಧಿಕಾರಿಯನ್ನು ನಿಂದಿಸಿದ ಶಾಸಕನ ಪುತ್ರ?: ವಿಡಿಯೊ ವೈರಲ್*
![](https://pragativahini.com/wp-content/uploads/2022/07/Latest-News.jpg)
ಪ್ರಗತಿವಾಹಿನಿ ಸುದ್ದಿ : ಅಕ್ರಮ ಮರಳುಗಾರಿಕೆಯನ್ನು ನಡೆಸುತ್ತಿದ್ದ ವಾಹನವನ್ನು ತಡೆ ಹಿಡಿದ ಮಹಿಳಾ ಅಧಿಕಾರಿಯೊಬ್ಬರಿಗೆ ಭದ್ರಾವತಿ ಶಾಸಕರ ಪುತ್ರ ಬಸವೇಶ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆನ್ನಲಾದ ಘಟನೆ ನಡೆದಿದೆ. ಇಡೀ ಘಟನೆಯ ವಿಡಿಯೋವನ್ನು ತನ್ನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಬಿಜೆಪಿ ಇದೇನಾ ಕಾಂಗ್ರೆಸ್ ನ ಗೂಂಡಾ ರಾಜ್ಯ ಎಂದು ಆಕ್ರೋಶ ವ್ಯಕ್ತಪಡಿಸಿದೆ.
![](https://pragativahini.com/wp-content/uploads/2025/02/IMG_20250211_095541_650_x_350_pixel.jpg)
ಶಿವಮೊಗ್ಗದ ಭದ್ರಾವತಿ ಶಾಸಕರ ಪುತ್ರ ಬಸವೇಶ್ ಅವರು, ಮಹಿಳಾ ಅಧಿಕಾರಿಗೆ ಅವಾಚ್ಯವಾಗಿ ಬೈದಿರುವುದು ವಿಡಿಯೋದಲ್ಲಿದೆ.
ಭದ್ರಾವತಿ ಭದ್ರಾ ನದಿತಟದಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆ ಮೇಲೆ ಗಣಿ ಇಲಾಖೆಯ ಅಧಿಕಾರಿ ಜ್ಯೋತಿ ಮೊನ್ನೆ ಮಧ್ಯರಾತ್ರಿ ದಾಳಿ ಮಾಡಿದ್ದರು. ಈ ವೇಳೆ ನಡೆದ ಘಟನೆಯ ವಿಡಿಯೋ ವೈರಲ್ ಆಗಿದೆ. ಈ ಕುರಿತು ಪ್ರತಿಪಕ್ಷಗಳಾದ ಜೆಡಿಎಸ್ ಹಾಗೂ ಬಿಜೆಪಿ ತೀವ್ರವಾಗಿ ಕಿಡಿಕಾರಿದೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಜೆಡಿಎಸ್, ಕಾಂಗ್ರೆಸ್ ಸರ್ಕಾರದಲ್ಲಿ ದಕ್ಷ, ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆಯೇ ಇಲ್ಲವಾಗಿದೆ ಎಂದು ಕಿಡಿಕಾರಿದೆ.
ರಾಜ್ಯ ಬಿಜೆಪಿ ಪೋಸ್ಟ್ ಮಾಡಿ, “ಮಹಿಳೆಯರಿಗೆ ರಕ್ಷಣೆಯಿಲ್ಲ – ಮಹಿಳಾ ಅಧಿಕಾರಿಗಳಿಗೆ ಗೌರವವಿಲ್ಲ” ಇದು ಕಾಂಗ್ರೆಸ್ ಸರ್ಕಾರದ ಮಹಿಳಾ ನೀತಿ!! ಶಿವಮೊಗ್ಗ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿ ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಯಲು ಸ್ಥಳಕ್ಕೆ ಹೋದಾಗ ಭದ್ರಾವತಿ ಶಾಸಕರ ಪುತ್ರ ಬಸವೇಶ ಬಳಸಿದ ಭಾಷೆ ಅತ್ಯಂತ ಖಂಡನೀಯ ಸಿಎಂ ಸಿದ್ದರಾಮಯ್ಯ ಅವರೆ, ಡಿಸಿಎಂ ಡಿಕೆ.ಶಿವಕುಮಾರ್ ಅವರೆ, ಮಹಿಳಾ ಅಧಿಕಾರಿಗಳಿಗೆ ಅವಾಚ್ಯವಾಗಿ ನಿಂದಿಸುವುದು ನಿಮ್ಮ ಕಾಂಗ್ರೆಸ್ ಸಂಸ್ಕೃತಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಭದ್ರಾವತಿಯನ್ನು ರಿಪಬ್ಲಿಕ್ ಮಾಡಿ ಆಟಾಟೋಪ ಮೆರೆಯುತ್ತಿರುವ ಶಾಸಕರ ಪುತ್ರ ಬಸವೇಶ್‌ರನ್ನು ಬಂಧಿಸಿ, ಗಡಿಪಾರು ಮಾಡಿ ಎಂದು ಒತ್ತಾಯಿಸಿದೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ