ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರಿಗೆ ಸುಳ್ಳು ಹೇಳುವ ಚಟ ಬಹಳ ಇದೆ. ಬೆಳಗಾವಿಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವರ್ಚಸ್ಸು ಕಡಿಮೆ ಮಾಡಲು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಎಂಎಲ್ ಸಿ ಚನ್ನರಾಜ ಹಟ್ಟಿಹೊಳಿ ಕಿಡಿಕಾರಿದ್ದಾರೆ.
ಬೆಳಗಾವಿಯಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಚನ್ನರಾಜ ಹಟ್ಟಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ರಮೇಶ್ ಜಾರಕಿಹೊಳಿ ಹೇಳಿಕೆಯನ್ನು ಖಂಡಿಸುತ್ತೇನೆ. ಅಸಭ್ಯವಾಗಿ ಮಾತನಾಡುವ ಚಟ ಬಿಡದಿದ್ದರೆ ರಮೇಶ್ ಜಾರಕಿಹೊಳಿಗೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.
ರಮೇಶ್ ಜಾರಕಿಹೊಳಿ ಸುಳ್ಳು ಆರೋಪ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಮೊನ್ನೆ ಸುಳೇಬಾವಿಯಲ್ಲಿ ಪ್ರತಿ ಓಟಿಗೆ 6 ಸಾವಿರ ರೂ. ಕೊಡುವುದಾಗಿ ಹೇಳಿದ್ದನ್ನು ಮಾಧ್ಯಮಗಳು ಪ್ರಸಾರ ಮಾಡಿವೆ., ಮರು ದಿನ ನಾನು ಹಾಗೆ ಹೇಳಿಯೇ ಇಲ್ಲ ಎಂದರು. ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆಯಲ್ಲಿ ಎಥೆನಾಲ್ ಘಟಕ ಮಾಡುವುದಾಗಿ ಹೇಳಿ ಸಾಲ ಎತ್ತಿ ಘಟಕವನ್ನೇ ಮಾಡಲಿಲ್ಲ. ಈಗ ಕಾರ್ಖಾನೆ ದಿವಾಳಿಯಾಗಿದೆ ಎಂದು ಸಾರಿದ್ದಾರೆ. ಇಂತವರಿಗೆ ನಮ್ಮ ಬಗ್ಗೆ ಮಾತನಾಡಲು ಏನು ನೈತಿಕತೆ ಇದೆ ಎಂದು ಚನ್ನರಾಜ ಪ್ರಶ್ನಿಸಿದರು.
ಅವರ ಅಪರಾಧವನ್ನು ನಮ್ಮ ಮೇಲೆ ತಿರುಗಿಸುವ ಯತ್ನ ಮಾಡುತ್ತಿದ್ದಾರೆ. ಹರ್ಷ ಸಕ್ಕರೆ ಕಾರ್ಖಾನೆ ದಾಖಲೆಗಳು ವೆಬ್ ಸೈಟ್ ನಲ್ಲಿ ಎಲ್ಲರಿಗೂ ಲಭ್ಯವಿವೆ. ಒಮ್ಮೆ ಅವ್ಯವಹಾರ ನಡೆದಿದ್ದರೆ ದಾಖಲೆ ಬಿಡುಗಡೆ ಮಾಡಲಿ. ಸುಮ್ಮನೆ ಹೇಳಿಕೆ ನೀಡುವುದು ಸರಿಯಲ್ಲ. ರಾಜ್ಯದ ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಕೀಳುಮಟ್ಟದ ಹೇಳಿಕೆ ಕೊಡುವುದನ್ನು ಜಾರಕಿಹೊಳಿ ಮೊದಲು ನಿಲ್ಲಿಸಲಿ. ಅವರಷ್ಟು ಕೀಳು ಮಟ್ಟಕ್ಕೆ ಇಳಿಯಲು ನಮಗೆ ಸಾಧ್ಯವಿಲ್ಲ. ನಾನು ಮತ್ತು ಲಕ್ಷ್ಮೀ ಹೆಬ್ಬಾಳಕರ್ ಇಬ್ಬರೂ ವಿದ್ಯಾವಂತರಿದ್ದೇವೆ. ಜನರು ನಮ್ಮನ್ನು ಗೌರವದಿಂದಲೇ ನೋಡುತ್ತಾರೆ ಎಂದು ಗುಡುಗಿದ್ದಾರೆ.
ಲಕ್ಷ್ಮಿ ಹೆಬ್ಬಾಳ್ಕರ್ ಗೆ ಟಿಕೆಟ್ ಕೊಡಿಸಿದ್ದೇ ನಾನು ಎಂದು ಹೇಳಿರುವ ರಮೇಶ್ ಜಾರಕಿಹೊಳಿ ಹೇಳಿಕೆಗೆ ತಿರುಗೇಟು ನೀಡಿದ ಚನ್ನರಾಜ ಹಟ್ಟಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಟಿಕೆಟ್ ಕೊಟ್ಟಿದ್ದು ಜಿ.ಪರಮೇಶ್ವರ್, ಆಗ ಡಿ.ಕೆ.ಶಿವಕುಮಾರ ಕೆಪಿಸಿಸಿ ಅಧ್ಯಕ್ಷರಿರಲಿಲ್ಲ. ಪರಮೇಶ್ವರ ಅಧ್ಯಕ್ಷರಾಗಿದ್ದರು. ಟಿಕೆಟ್ ಕೊಡಿಸಲು ರಮೇಶ ಜಾರಕಿಹೊಳಿ ಸೋನಿಯಾ ಗಾಂದಿ ಅವರಿಗಿಂತ, ರಾಹುಲ್ ಗಾಂಧಿಯವರಿಗಿಂತ, ಪ್ರಿಯಾಂಕಾ ಗಾಂಧಿ ಅವರಿಗಿಂತ, ಡಾ.ಜಿ.ಪರಮೇಶ್ವರ ಅವರಿಗಿಂತ, ಕಾಂಗ್ರೆಸ್ ಪಕ್ಷಕ್ಕಿಂತ ದೊಡ್ಡವರಾ ಎಂದು ಪ್ರಶ್ನಿಸಿದ ಚನ್ನರಾಜ ಹಟ್ಟಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಸ್ವಂತ ಬಲದಿಂದ ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಹೊರತು ರಮೇಶ್ ಜಾರಕಿಹೊಳಿ ಗೆಲ್ಲಿಸಿಲ್ಲ. ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಕುಗ್ಗಿಸಲು ರಮೇಶ್ ಜಾರಕಿಹೊಳಿ ಇಲ್ಲಸಲ್ಲದ ಆರೋಪ ಮಾತನಾಡುತ್ತಿದ್ದಾರೆ. ಬಿಜೆಪಿ ಸೇರುವಂತೆ ನಮಗೂ ಆಹ್ವಾನ ನೀಡಿದ್ದರು. ಆದರೆ ನಾವು ಅದಕ್ಕೆ ಒಪ್ಪಲಿಲ್ಲ. ಸಮ್ಮಿಶ್ರ ಸರಕಾರ ಕೆಡಗುವುದು ಬೇಡ. ನೀವು ಹೋಗಬೇಡಿ ಎಂದಿದ್ದೆವು.. ಹಾಗಾಗಿ ನಮ್ಮ ಬಗ್ಗೆ ಅವರಿಗೆ ವೈಮನಸ್ಸು ಆರಂಭವಾಯಿತು ಎಂದು ಚನ್ನರಾಜ ವಿವರಿಸಿದರು.
ನಾವು ಬೆಳಗಾವಿ ಜಿಲ್ಲೆಯ ಎಲ್ಲ 18 ಕ್ಷೇತ್ರಗಳಿಗೂ ಪ್ರಚಾರಕ್ಕೆ ಹೋಗುತ್ತೇವೆ. ಇವರಂತೆ ವಯಕ್ತಿಕ ಜಿದ್ದು ಇಟ್ಟುಕೊಂಡು ಪ್ರಚಾರ ಮಾಡುವುದಿಲ್ಲ. ಪಕ್ಷದ ತತ್ವ, ಸಿದ್ಧಾಂತದ ಮೇಲೆ ಕೆಲಸ ಮಾಡುತ್ತೇವೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಗೆ ಹೆಚ್ಚು ಸ್ಥಾನ ಗೆಲ್ಲಿಸಿಕೊಡುವ ಜವಾಬ್ದಾರಿ ನಮ್ಮ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ಮೇಲಿದೆ. ಆ ಕರ್ತವ್ಯವನ್ನು ಸರಿಯಾಗಿ ನಿಭಾಯಿಸುತ್ತೇವೆ. ಅದರ ಭಾಗವಾಗಿ ಗೋಕಾಕ ಕ್ಷೇತ್ರದಲ್ಲೂ ಪ್ರಚಾರ ಮಾಡುತ್ತೇವೆ ಎಂದು ತಿಳಿಸಿದರು.
*ಆಡಿಯೋ, ದಾಖಲೆಗಳಿವೆ, 20 ಸಿಡಿಗಳಿವೆ ಎನ್ನುತ್ತಲೇ ಯಾವುದನ್ನೂ ಬಿಡುಗಡೆ ಮಾಡಲ್ಲ ಎಂದ ರಮೇಶ್ ಜಾರಕಿಹೊಳಿ*
https://pragati.taskdun.com/ramesh-jarakiholid-k-shivakumarpressmeet/
*ಡಿ.ಕೆ.ಶಿವಕುಮಾರ್ ವಿರುದ್ಧ ಆಡಿಯೋ ಬಿಡುಗಡೆ ಮಾಡಿದ ರಮೇಶ್ ಜಾರಕಿಹೊಳಿ*
https://pragati.taskdun.com/d-k-shivakumaraudio-releaseramesh-jarakiholibelagavi/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ