ಶ್ರೀ ಶೈಲ ಜಗದ್ಗುರುಗಳ ವ್ಯಸನಮುಕ್ತ ಸಮಾಜ ನಿರ್ಮಾಣ ಕೈಂಕರ್ಯಕ್ಕೆ ಕೈಜೋಡಿಸಿ: ವಿಪ ಸದಸ್ಯ ಲಕ್ಷ್ಮಣ ಸವದಿ
ಪ್ರಗತಿವಾಹಿನಿ ಸುದ್ದಿ, ಅಥಣಿ: ಇಂದಿನ ಯುವ ಪೀಳಿಗೆಗಳನ್ನು ದುಷ್ಚಟಗಳಿಂದ ದೂರಮಾಡುವ ನಿಟ್ಟಿನಲ್ಲಿ ಮತ್ತು ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಶ್ರೀ ಶೈಲ ಜಗದ್ಗುರುಗಳು ತಮ್ಮ ಜನ್ಮ ಸುವರ್ಣ ಮಹೋತ್ಸವದ ನಿಮಿತ್ತ ಕೈಗೊಂಡಿರುವ ಪಾದಯಾತ್ರೆಗೆ ಎಲ್ಲರೂ ಕೈಜೋಡಿಸ ಬೇಕಾದದ್ದು ಭಕ್ತರ ಆದ್ಯ ಕರ್ತವ್ಯ ಎಂದು ಮಾಜಿ ಉಪಮುಖ್ಯಮಂತ್ರಿ, ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಹೇಳಿದರು.
ಅವರು ಸ್ಥಳೀಯ ಶಿವಣಗಿ ಕಲ್ಯಾಣ ಮಂಟಪದಲ್ಲಿ ಶ್ರೀ ಶೈಲ ಜಗದ್ಗುರುಗಳ ದ್ವಾದಶ ಪೀಠಾರೋಹಣ ಮಹೋತ್ಸವ ಹಾಗೂ ಜನ್ಮ ಸುವರ್ಣ ಮಹೋತ್ಸವ ನಿಮಿತ್ತ ಭಕ್ತರು ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯ ಯಡಿಯೂರಿನಿಂದ ಶ್ರೀ ಶೈಲದವರೆಗೆ ಸುಮಾರು 600 ಕಿ.ಮೀ ಅಕ್ಟೋಬರ್ 29 ರಿಂದ ನಿರಂತರ 33 ದಿನಗಳಕಾಲ ಪಾದಯಾತ್ರೆಯ ಮೂಲಕ ಜನರಲ್ಲಿ ಧಾರ್ಮಿಕ, ಸಾಮಾಜಿಕ ಹಾಗೂ ಜನ ಜಾಗೃತಿಯ ಜತೆಗೆ ದಾರಿ ಉದ್ದಕ್ಕೂ ರಸ್ತೆಯ ಎರಡು ಬದಿಯಲ್ಲಿ ಗಿಡಗಳನ್ನು ನೆಟ್ಟು ಇದರ ಮೂಲಕ ಗ್ರಾಮಗಳ ಜನರು ಕೂಡ ಇವುಗಳ ಪೋಷಣೆಯ ಜತೆ ಪರಿಸರ ಕುರಿತು ಅರಿವು ಮೂಡಿಸುವ ಕಾರ್ಯ ಮಾಡಲಿದ್ದಾರೆ ಎಂದರು.
ದಾರಿಯುದ್ದಕ್ಕೂ ಗ್ರಾಮಗಳಲ್ಲಿ ವಿಚಾರ ಸಂಕಿರಣ, ರೈತ ಸಮುದಾಯ ಮತ್ತು ಭಕ್ತರೊಂದಿಗೆ ಸಂವಾದ ನಡೆಸಲಿದ್ದಾರೆ. ಶ್ರೀಗಳು ಜಾತ್ಯತೀತ ಮನೋಭಾವನೆಯೊಂದಿಗೆ ಮಾನವ ಕುಲ ಶ್ರೇಷ್ಠ ಎಂಬ ಕಲ್ಪನೆ ಹೊಂದಿದ್ದು ಅಲ್ಲದೇ ಅಥಣಿಗೆ ಮತ್ತು ಶ್ರೀಶೈಲಕ್ಕೂ ಅವಿನಾಭಾವ ನಂಟು ಮೊದಲಿನಿಂದಲೂ ಇದೆ.ತಾಲೂಕಿನ ಪಿಕೆ ನಾಗನೂರಿನ ಮಹಿಳೆ ನಿರಂತರ ಮೂರು ವರ್ಷಗಳ ಕಾಲ ದೀರ್ಘದಂಡ ನಮಸ್ಕಾರ ಹಾಕಿದ ಭಕ್ತರು ನಮ್ಮವರು ವರ್ಷಂಪ್ರತಿ ಅತೀ ಹೆಚ್ಚು ಪಾದಯಾತ್ರೆ ಮೂಲಕ ಶ್ರೀಶೈಲಕ್ಕೆ ಹೋಗವವರು ನಾವುಗಳು ಎಂದರು. ಅದಕ್ಕಾಗಿ ಎಲ್ಲ ರೀತಿಯಿಂದ ಸಹಾಯ ಸಹಕಾರ ಅಧ್ಯಾತ್ಮ ತವರೂರು ಆದ ಅಥಣಿ ತಾಲೂಕಿನ ಜನತೆಯ ಕರ್ತವ್ಯ ಎಂದರು.
ವಿವಿಧ ಶ್ರೀಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ