
ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಇನ್ನು 21 ದಿನ ಸಂಪೂರ್ಣ ಭಾರತ ಲಾಕ್ ಡೌನ್ ಆಗಲಿದೆ. ಏ.15ರ ವರೆಗೆ ಯಾರೂ ಮನೆಯಿಂದ ಹೊರಗೆ ಬರಬೇಡಿ. 21 ದಿನ ನೀವು ಮನೆಯಲ್ಲಿರದಿದ್ದಲ್ಲಿ ನಿಮ್ಮ ಕುಟುಂಬ 21 ವರ್ಷ ಹಿಂದಕ್ಕೆ ಹೋಗಲಿದೆ -ಪ್ರಧಾನ ನರೇಂದ್ರ ಮೋದಿ ರಾಷ್ಟ್ರದ ಜನರಿಗೆ ಮಾಡಿದ ಮನವಿ ಮತ್ತು ಎಚ್ಚರಿಕೆ.
ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡುತ್ತಿರುವ ಮೋದಿ, ಜನರಲ್ಲಿ ಕೈ ಮುುಗಿದು ಮನವಿ ಮತ್ತು ಎಚ್ಚರಿಕೆಯ ಸಂದೇಶ ನೀಡಿದರು. ನಾನು ಪ್ರಧಾನಿಯಾಗಿ ಅಲ್ಲ, ನಿಮ್ಮ ಕುಟುಂಬದ ಸದಸ್ಯನಾಗಿ ಕೈ ಮಗಿದು ಬೇಡಿಕೊಳ್ಳುತ್ತಿದ್ದೇನೆ ಎಂದರು.
ಕೊರೋನಾದಿಂದ ವಿಶ್ವದಲ್ಲಿ ಉಂಟಾಗಿರುವ ಪರಿಸ್ಥಿತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಪ್ರಧಾನಿ, ನಿಮಗೆ ನೀವೇ ಲಕ್ಷ್ಮಣ ರೇಖೆ ಹಾಕಿಕೊಂಡು ಎಲ್ಲಿದ್ದೀರೋ ಅಲ್ಲೇ ಇರಿ. ಏನು ಮಾಡಬೇಕೆಂದಿದ್ದೀರೋ ಅಲ್ಲಿಂದಲೇ ಮಾಡಿ. ದಯಮಾಡಿ ಹೊರಗೆ ಬರಬೇಡಿ. ನಾನು ನಿಮಗೆ ಕೈ ಮುಗಿದು ಪ್ರಾರ್ಥಿಸುತ್ತೇನೆ. 21 ದಿನದ ನಂತರ ಎಲ್ಲವೂ ಸುಗಮವಾಗಲಿದೆ ಎಂದು ಹೇಳಿದರು.
ಕೊರೋನಾ ಯಾವ ರೀತಿಯಲ್ಲಿ ಮತ್ತು ಎಷ್ಟು ವೇಗವಾಗಿ ಹರಡುತ್ತಿದೆ ಎಂದು ವಿವರಿಸಿದ ಅವರು, ಅತ್ಯಾಧುನಿಕ ಆರೋಗ್ಯ ವ್ಯವಸ್ಥೆ ಹೊಂದಿರುವ ರಾಷ್ಟ್ರಗಳೇ ತತ್ತರಿಸಿ ಹೋಗಿವೆ. ಕೇವಲ 11 ದಿನದಲ್ಲಿ 1 ಲಕ್ಷ ಜನರಿಗೆ ಸೋಂಕು ತಗುಲಿದೆ. ನಾವು ಜಾಗ್ರತರಾಗದಿದ್ದರೆ ಇನ್ನು ಮೂರೇ ದಿನದಲ್ಲಿ ಇನ್ನೂ ಒಂದು ಲಕ್ಷ ಜನರಿಗೆ ಹರಡಲಿದೆ ಎಂದು ಎಚ್ಚರಿಸಿದರು.
ಕೊರೋನಾ ವಿರುದ್ಧ ಕಾರ್ಯಾಚರಣೆಗಾಗಿ 15 ಸಾವಿರ ಕೋಟಿ ರೂ. ಮೀಸಲಿಡುವುದಾಗಿ ಮೋದಿ ಘೋಷಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ