ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅತ್ಯಂತ ಕಷ್ಟದ ಸಮಯದಲ್ಲೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮತ್ತು ಹಾಪ್‍ಕಾಮ್ಸಗಳು ರೈತರ ನೆರವಿಗೆ ಬರುತ್ತಿಲ್ಲ ಎಂದು ಭಾರತೀಯ ಕೃಷಿಕ ಸಮಾಜ (ಸಂ) ದ ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ ಕಳವಳ ವ್ಯಕ್ತ ಪಡಿಸಿದ್ದಾರೆ.
ರೈತರ ತರಕಾರಿಗಳಿಗೆ ಎಪಿಎಂಸಿ ಮಾರುಕಟ್ಟೆಗಳಲ್ಲಿ ಸಿಗುತ್ತಿರುವ ಬೆಲೆಗೂ, ಚಿಲ್ಲರೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಬೆಲೆಗಳಲ್ಲಿ ಹಿಂದೆಂದಿಗಿಂತಲೂ ಇಂದು ಅಜಗಜಾಂತರ ವ್ಯತ್ಯಾಸ ಇದೆ. ಎಪಿಎಂಸಿ ಸಗಟು ಮಾರಾಟದಲ್ಲಿ ಪ್ರತಿ ಕಿಲೋ ಟೊಮೆಟೋಗೆ 2 ರೂ. ಸಿಗುತ್ತಿದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ 20ರಿಂದ 30 ರೂ.ಗೆ ಕಿಲೋ ಮಾರಾಟ ಮಾಡಲಾಗುತ್ತಿದೆ. ಈ ವ್ಯತ್ಯಾಸದಿಂದ ಒಂದೆಡೆ ರೈತರು ಸೂಕ್ತ ಬೆಲೆ ಸಿಗದೆ ತೀವ್ರ ಕಷ್ಟ ಅನುಭವಿಸುತ್ತಿದ್ದರೆ, ಇನ್ನೊಂದೆಡೆ ಗ್ರಾಹಕರಿಗೆ ದುಬಾರಿಯಾಗಿದೆ ಎಂದು ಅವರು ವಿವರಿಸಿದ್ದಾರೆ.
ಕೇವಲ ಟೊಮಾಟೋ ಅಷ್ಟೆ ಅಲ್ಲ. ಪ್ರತಿಯೊಂದು ತರಕಾರಿಯ ಕಥೆಯೂ ಇದೇ ಆಗಿದೆ. ರೈತರಿಗೆ ತರಕಾರಿಯನ್ನು ಹೊಲದಿಂದ ಮಾರುಕಟ್ಟೆಗೆ ಸಾಗಿಸುವ ಸಾರಿಗೆ ವೆಚ್ಚವೂ ಸಿಗುತ್ತಿಲ್ಲ. ಸಗಟು ಮತ್ತು ಚಿಲ್ಲರೆ ಮಾರಾಟದ ಬೆಲೆಯಲ್ಲಿರುವ ಬಹುದೊಡ್ಡ ಅಂತರವು ಕಮಿಷನ್ ಏಜೆಂಟರ ಮತ್ತು ದಲ್ಲಾಳಿಗಳ ಪಾಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಸರಕಾರದ ಅಥವಾ ಸಚಿವರುಗಳ ಆದೇಶವು ಕೇವಲ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿವೆ. ಆದೇಶಗಳ ಪಾಲನೆ ಆಗುತ್ತಿಲ್ಲ. ರೈತರಿಗೆ ಅನುಕೂಲವಾಗುತ್ತಿಲ್ಲ ಎಂದಿರುವ ಅವರು, ಈ ಲೂಟಿ ನಿಲ್ಲದಿದ್ದರೆ, ರೈತರು ಬಹುದೊಡ್ಡ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಲಿದ್ದಾರೆ. ರೈತರ ಇಂದಿನ ಆರ್ಥಿಕ ಸಂಕಷ್ಟವು ಮುಂಗಾರು ಹಂಗಾಮಿನ ಮೇಲೆ ತೀವ್ರ ಪರಿಣಾಮ ಬೀರಲಿದೆ. ದೇಶವು ಆಹಾರದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಸರಕಾರದ ಆದೇಶದ ನಂತರವೂ ಹಾಪ್‍ಕಾಮ್ಸಗಳು ನೇರವಾಗಿ ಯಾವೊಬ್ಬ ರೈತನ ಹಣ್ಣು ಹಂಪಲಗಳನ್ನು ಖರೀದಿಸಿಲ್ಲ. ಹಾಪ್‍ಕಾಮ್ಸಗಳು ನಗರದಲ್ಲಿ ಹಣ್ಣುಗಳನ್ನು ಖರೀದಿಸಿ ಮಾರಾಟ ಮಾಡುತ್ತಿವೆ. ಹಣ್ಣುಗಳ ಮಾರಾಟಕ್ಕಿಂತ ಗುಟ್ಕಾಗಳು, ಕೂಲಡ್ರಿಂಕ್ಸ್ ಗಳ ಮಾರಾಟದಲ್ಲಿ ತೊಡಗಿವೆ ಎಂದು ಆರೋಪಿಸಿರುವ ಅವರು, ಹಣ್ಣುಗಳಿಗೆ ಮಾರುಕಟ್ಟೆ ಸಿಗದ್ದರಿಂದ, ಅನೇಕ ರೈತರು ಕಲ್ಲಂಗಡಿ ಸೇರಿದಂತೆ ತಮ್ಮ ಹೊಲದಲ್ಲಿಯ ಹಣ್ಣುಗಳನ್ನು ಟ್ರ್ಯಾಕ್ಟರ್‍ಗಳಲ್ಲಿ ತುಂಬಿಗೊಂಡು ಅಕ್ಕಪಕ್ಕದ ಗ್ರಾಮಗಳ ಜನರಿಗೆ ಉಚಿತವಾಗಿ ಹಂಚುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ರೈತರ ಶ್ರಮ ಮತ್ತು ಮಾನವೀಯತೆಯು ಸರಕಾರದ ಹಾಗೂ ವ್ಯಾಪಾರಿಗಳ ಕಣ್ಣಿಗೆ ಕಾಣದಿರುವುದು ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ ಎಂದು ಅವರು ಬೇಸರ ವ್ಯಕ್ತ ಪಡಿಸಿದ್ದಾರೆ.
ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತವು ಈ ಕಡೆ ಗಮನ ಹರಿಸಿ, ಸೂಕ್ತ ಕ್ರಮ ಜರುಗಿಸಬೇಕು ಎಂದು ಅವರು ಪ್ರಕಟನೆಯ ಮೂಲಕ ಮನವಿ ಮಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ