ರಾಜ್ಯ ಸರ್ಕಾರಕ್ಕೆ ಹೈಕೋರ್ಟ್​ ನೋಟಿಸ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಂಗಳೂರು ಗೋಲಿಬಾರ್​​ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್,​ ರಾಜ್ಯ ಸರ್ಕಾರಕ್ಕೆ ನೋಟಿಸ್​​​ ಜಾರಿಗೊಳಿಸಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಡಿ.​​19ರಂದು ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರು ನಡೆಸಿದ ಗೋಲಿಬಾರ್​ ಗೆ ಇಬ್ಬರು ಸಾವನ್ನಪ್ಪಿದ್ದರು. ಪ್ರಕರಣ ಕುರಿತು​ ನ್ಯಾಯಾಂಗ ತನಿಖೆ ನಡೆಸಲು ಆದೇಶಿಸುವಂತೆ ಕೋರಿ ಜೆಡಿಎಸ್ ಮುಖಂಡ ಮುಹಮ್ಮದ್ ಇಕ್ಬಾಲ್ ಮತ್ತು ಉಮರ್ ಎಂಬುವರು ಹೈಕೋರ್ಟ್​​ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​, ರಾಜ್ಯ ಸರ್ಕಾರಕ್ಕೆ ನೋಟಿಸ್​​ ನೀಡಿದೆ.

ಪೊಲೀಸರ ಗೋಲಿಬಾರ್​​ ಕುರಿತಂತೆ ಸೂಕ್ತ ದಾಖಲೆಗಳನ್ನು ನೀಡುವಂತೆ ಆದೇಶಿಸಿದೆ. ಇದೇ ತಿಂಗಳು ಜನವರಿ 28ನೇ ತಾರೀಕಿನೊಳಗೆ ದಾಖಲೆ ಸಮೇತ ಮಾಹಿತಿ ನೀಡುವಂತೆ ಸೂಚಿಸಿ, ವಿಚಾರಣೆಯನ್ನು ಫೆಬ್ರವರಿ 5.ಕ್ಕೆ ಮುಂದೂಡಿದೆ.

ಮಂಗಳೂರಿನಲ್ಲಿ ಪೊಲೀಸರು ನಡೆಸಿದ್ದ ಗೋಲಿಬಾರ್ ನಲ್ಲಿ ಜಲೀಲ್ ಮತ್ತು ನೌಶಾದ್ ಎಂಬುವವರು ಬಲಿಯಾಗಿದ್ದರು. ಪೊಲೀಸರ ಕೃತ್ಯ ಹಾಗೂ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ನಡುವೆ ಗುಂಡೇಟಿಗೆ ಬಲಿಯಾದ ಜಲೀಲ್ ಮತ್ತು ನೌಶಾದ್ ವಿರುದ್ಧವೇ ಎಫ್​ಐಆರ್ ದಾಖಲಿಸುವ ಮೂಲಕ ಪೊಲೀಸರು ವಿವಾದಕ್ಕೆ ಕಾರಣರಾಗಿದ್ದರು. ಡಿ. 19ರಂದು ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ತಮ್ಮ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ. ಮಂಗಳೂರಿನ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ, ಪೊಲೀಸರನ್ನು ಕೊಲ್ಲು ಸಂಚು ರೂಪಿಸಿದ್ದ ಗುಂಪಿನ ಮೇಲೆ ಗುಂಡು ಹಾರಿಸಿದಾಗ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಎಫ್​ಐಆರ್​ನಲ್ಲಿ ದಾಖಲಿಸಲಾಗಿತ್ತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button