
ಪ್ರಗತಿವಾಹಿನಿ ಸುದ್ದಿ : ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ಮಂಗನ ಕಾಯಿಲೆ ಮತ್ತೆ ಕಾಣಿಸಿಕೊಂಡಿದೆ. ಮಲೆನಾಡು ಭಾಗದ ಕಾಡಂಚಿನ ಗ್ರಾಮದ ಜನರಲ್ಲಿ ಆತಂಕ ಶುರುವಾಗಿದೆ.
ಕೆ.ಎಫ್.ಡಿ. ಪಾಸಿಟಿವ್ ಕೇಸ್‌ಗಳು ಈ ಬಾರಿ ದೊಡ್ಡ ಪ್ರಮಾಣದಲ್ಲಿ ಸ್ಪೋಟವಾಗುವ ಮುನ್ಸೂಚನೆ ದೊರೆತಿದ್ದು, ಅವಧಿಗೂ ಮುನ್ನವೇ ಕೆ.ಎಫ್.ಡಿ. ಕೇಸ್‌ಗಳ ಸಂಖ್ಯೆ 8ಕ್ಕೆ ಏರಿಕೆಯಾಗಿರುವುದು ಸಾಕಷ್ಟು ಭಯ ಹುಟ್ಟಿಸಿದೆ.
ಈ ಸೋಂಕು ಪ್ರತಿ ವರ್ಷ ಫೆಬ್ರವರಿ ಸಮಯದಲ್ಲಿ ಕಂಡುಬರುತ್ತಿತ್ತು. ಆರೋಗ್ಯ ಇಲಾಖೆ ಇದಕ್ಕೆ ಮುನ್ನೆಚ್ಚರಿಕಾ ಕ್ರಮಗಳನ್ನ ಸಹ ತೆಗೆದುಕೊಳ್ಳುತ್ತಿತ್ತು. ಆದರೆ ಈ ವರ್ಷ ಡಿಸೆಂಬರ್ ತಿಂಗಳಲ್ಲೇ ಈ ಸೋಂಕು ಕಾಣಿಸಿಕೊಂಡಿದೆ.
ಹೊಸನಗರ ತಾಲೂಕಿನ ಬಿಳ್ಳೂಡಿ-ಸೋನಲೆ ಗ್ರಾಮದಲ್ಲಿ ಕಳೆದ ವಾರ ಹೊಸನಗರ ತಾಲೂಕಿನ ಬಿಳ್ಳೂಡಿ ಗ್ರಾಮದಲ್ಲಿ 55 ವರ್ಷದ ಮಹಿಳೆಗೆ ಕಾಣಿಸಿಕೊಂಡಿತ್ತು. ಆರೋಗ್ಯ ಇಲಾಖೆ ಅದೇ ಊರಿನ ಮತ್ತಷ್ಟು ಜನರನ್ನು ಪರೀಕ್ಷೆಗೆ ಒಳಪಡಿಸಿದ್ದು ಇದೀಗ 7 ಜನರಿಗೆ ಪಾಸಿಟಿವ್ ಬಂದಿದೆ. ಇಲ್ಲಿಯವರೆಗೆ ಒಟ್ಟು 8 ಜನರಲ್ಲಿ ಕೆ.ಎಫ್.ಡಿ. ಸೋಂಕು ಕಾಣಿಸಿಕೊಂಡಿದೆ. 8 ಜನರಲ್ಲಿ ಮೂವರು ಪುರುಷರಿದ್ದು, ಐವರು ಮಹಿಳೆಯರು. ಸದ್ಯ ಎಲ್ಲರೂ ಆರೋಗ್ಯವಾಗಿದ್ದಾರೆ.
ಕಾಡಂಚಿನ ಪ್ರದೇಶಗಳಲ್ಲಿ ದುಡಿಮೆಗಾಗಿ ತೆರಳುವ ಗ್ರಾಮಸ್ಥರು ಕಡ್ಡಾಯವಾಗಿ ಡಂಪ್ ಎಣ್ಣೆ ಮೈಯಿಗೆ ಲೇಪಿಸಿಕೊಳ್ಳುವ ಮೂಲಕ, ಉಣ್ಣೆಗಳಿಂದ ರಕ್ಷಣೆ ಪಡೆಯುವಂತೆ ಅರೋಗ್ಯ ಇಲಾಖೆ ಸಿಬ್ಬಂದಿ ಸೂಚಿಸಿದ್ದಾರೆ. ಕಳೆದ 3 ದಿನಗಳಿಂದ ಕಾಡಂಚಿನ ಗ್ರಾಮಗಳಿಗೆ ತೆರಳಿ ಜನರಲ್ಲಿ ಅರೋಗ್ಯ ಸಿಬ್ಬಂದಿ ಜಾಗೃತಿ ಮೂಡಿಸುತ್ತಿದ್ದಾರೆ.


