
ಪ್ರಗತಿವಾಹಿನಿ ಸುದ್ದಿ: 11 ಮಂಗಗಳು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಹಲವು ಅನುಮಾನಕ್ಕೆ ಕಾರಣವಾಗಿದೆ.
ತುಮಕೂರು ಜಿಲ್ಲೆಯ ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ 11 ಮಂಗಗಳು ನಿಗೂಢವಾಗಿ ಮೃತಪಟ್ಟಿವೆ. ವಿಷಪ್ರಾಶನದಿಂದ ಕೋತಿಗಳು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಎರಡು ದಿನಗಳಲ್ಲಿ 9 ಮಂಗಗಳು ಹಾಗೂ 2 ಲಂಗೂರ್ ಗಳ ಮೃತದೇಹ ಪತ್ತೆಯಾಗಿದೆ. ಸ್ಥಳೀಯರ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿವೆ. ಮರಣೋತ್ತರ ಪರೀಕ್ಷೆಯಲ್ಲಿ ಮಂಗಗಳು ಯಾವುದೇ ಸೋಂಕಿನಿಂದ ಸಾವನ್ನಪ್ಪಿಲ್ಲ ಎಂದು ದೃಢಪಟ್ಟಿದೆ. ಬೆಂಗಳೂರು ಪಶುವೈದ್ಯಕೀಯ ವಿದ್ಯಾಲಯಕ್ಕೆ ಸ್ಯಾಂಪಲ್ ರವಾನಿಸಲಾಗಿದೆ.
ಘಟನೆ ಬಗ್ಗೆ ತುಮಕೂರು ಪ್ರಾದೇಶಿಕ ವಲ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.



