
ಪ್ರಗತಿವಾಹಿನಿ ಸುದ್ದಿ; ಕೊಚ್ಚಿ: ಈ ಬಾರಿ ಮುಂಗಾರು ಮಳೆ ಬೇಗನೇ ಆರಂಭವಾಗಲಿದ್ದು, ಜೂನ್ 1ರಿಂದ ಕೇರಳಕ್ಕೆ ನೈರುತ್ಯ ಮಾನ್ಸೂನ್ ಮಾರುತಗಳು ತಲುಪಲಿದ್ದು, ನಿರೀಕ್ಷೆಗೂ ಮೊದಲೇ ಮಳೆಗಾಲ ಆರಂಭವಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಜೂನ್ 5ರಂದು ದಕ್ಷಿಣ ರಾಜ್ಯಗಳಲ್ಲಿ ಮಳೆಗಾಲ ಆರಂಭವಾಗಲಿದೆ, ಕಳೆದ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಮಳೆಗಾಲ ತಡವಾಗಿ ಶುರುವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು. ಆದರೆ, ಇದೀಗ ಹೊಸ ಪ್ರಕಟಣೆ ಹೊರಡಿಸಿರುವ ಹವಾಮಾನ ಇಲಾಖೆ, ಬಂಗಾಳ ಕೊಲ್ಲಿಯಲ್ಲಿನ ಚಂಡಮಾರುತದಿಂದಾಗಿ ಮಾನ್ಸೂನ್ ಮಾರುತಗಳು ಜೂನ್ 1ರಂದು ಕೇರಳ ಪ್ರವೇಶಿಸಲಿವೆ ಎಂದು ಮಾಹಿತಿ ನೀಡಿದೆ.
ಮೇ 31ರಿಂದ ಜೂನ್ 4ರವರೆಗೆ ಆಗ್ನೇಯ ಮತ್ತು ಪೂರ್ವ ಮಧ್ಯ ಅರೇಬಿಯನ್ ಸಮುದ್ರದಲ್ಲಿ ಕಡಿಮೆ ಒತ್ತಡ ನಿರ್ಮಾಣವಾಗುವ ಸಾಧ್ಯತೆಯಿದೆ. ಹೀಗಾಗಿ ನೈರುತ್ಯ ಮಾನ್ಸೂನ್ ಮಾರುತಗಳು ಜೂನ್ 1ರಂದು ಕೇರಳಕ್ಕೆ ಆಗಮಿಸಲು ಅನುಕೂಲಕರ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.