Kannada NewsKarnataka NewsLatest

ಶಿಕ್ಷಕರ ಮೊಬೈಲ್ ಗೆ ಪ್ರತಿ ತಿಂಗಳು ಸಂಬಳದ ಮಾಹಿತಿ: ಬಿಇಒ

ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಲು ತಾಲ್ಲೂಕು ಆಡಳಿತ ಸದಾ
ಸಿದ್ಧವಿದೆ – ತಹಸೀಲ್ದಾರ್ ರೇಷ್ಮಾ ತಾಳಿಕೋಟಿ

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಪ್ರತಿ ತಿಂಗಳು ಬಟವಡೆಯಾಗುವ ಪ್ರಾಥಮಿಕ ಶಾಲಾ ಶಿಕ್ಷಕರ ಸಂಬಳ ಮಾಹಿತಿಯನ್ನು ಆಯಾ ಶಿಕ್ಷಕರ ಮೊಬೈಲ್ ಗೆ ರವಾನಿಸುವ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ವಿಶೇಷ ತಂತ್ರಜ್ಞಾನವನ್ನು
ಸಿದ್ಧಪಡಿಸಲಾಗಿದ್ದು, ಶಿಕ್ಷಕರ ದಿನದಂದು ಈ ಹೊಸ ತಂತ್ರಜ್ಞಾನ ವ್ಯವಸ್ಥೆಗೆ ಚಾಲನೆ
ನೀಡಲಾಗಿದೆ ಎಂದು ಬಿಇಒ ಲಕ್ಷ್ಮಣರಾವ್ ಯಕ್ಕುಂಡಿ ಮಾಹಿತಿ ನೀಡಿದರು.
ಪಟ್ಟಣದ ಬಿಇಒ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ತಾಲ್ಲೂಕುಮಟ್ಟದ ಶಿಕ್ಷಕರ
ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಹೊಸ ವ್ಯವಸ್ಥೆಯ
ಸಹಾಯದಿಂದ ತಾಲ್ಲೂಕಿನ ಶಿಕ್ಷಕರು ತಮ್ಮ ಸಂಬಳದ ವಿವರವನ್ನು ತಮ್ಮ ಮೊಬೈಲ್ ಗಳಲ್ಲೇ
ವೀಕ್ಷಿಸಬಹುದಾಗಿದ್ದು, ತಮ್ಮ ವಾರ್ಷಿಕ ವೇತನ ಬಡ್ತಿ, ತುಟ್ಟಿ ಭತ್ಯೆ ಮತ್ತು ಕಡಿತದ
ವಿವರಗಳಿಗಾಗಿ ಅವರು ಪದೇ ಪದೇ ಬಿಇಒ ಕಚೇರಿಗೆ ಭೇಟಿ ನೀಡುವ ತೊಂದರೆ ತಪ್ಪಲಿದೆ ಎಂದು
ವಿವರಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ತಹಸೀಲ್ದಾರ್ ರೇಷ್ಮಾ ತಾಳಿಕೋಟಿ ಮಾತನಾಡಿ, ಶಿಕ್ಷಕರು
ಶಾಲೆಗಳಲ್ಲಿ ಮಕ್ಕಳಿಗೆ ವಿದ್ಯೆ ಕಲಿಸುವುದರ ಜೊತೆಗೆ ಚುನಾವಣೆ, ಗಣತಿ, ಬಿ.ಎಲ್.ಒ,
ಕೋವಿಡ್ ಮತ್ತಿತರ ಕರ್ತವ್ಯಗಳ ಮೂಲಕ ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನಕ್ಕೂ
ಕಾರಣೀಕರ್ತರಾಗಿದ್ದಾರೆ. ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಲು ತಾಲ್ಲೂಕು ಆಡಳಿತ ಸದಾ
ಸಿದ್ಧವಿದೆ ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಚವಲಗಿ, ಕಾರ್ಯದರ್ಶಿ
ಯಶವಂತ ಪಾಟೀಲ, ಕ್ಷೇತ್ರ ಸಮನ್ವಯಾಧಿಕಾರಿ ಅಪ್ಪಣ್ಣ ಅಂಬಗಿ, ಐ.ಇ.ಆರ್.ಟಿ ಸಂಯೋಜಕ
ಶಂಕರ ಕಮ್ಮಾರ ಸೇರಿದಂತೆ ಶಿಕ್ಷಕರ ಸಂಘದ ಪದಾಧಿಕಾರಿಗಳು, ಬಿಇಒ ಕಚೇರಿಯ ಸಿಬ್ಬಂದಿ
ಇದ್ದರು. ಶೃದ್ಧಾ ಪಾಟೀಲ ಸ್ವಾಗತಿಸಿದರು. ಮಹಾಂತೇಶ ವಾಲಿ ನಿರೂಪಿಸಿದರು. ರಾಜಕುಮಾರ
ಕುಂಬಾರ ವಂದಿಸಿದರು.

ಪ್ರಾಥಮಿಕ ಶಾಲೆಗಳ ಆರಂಭ ವಿಚಾರ; ಸಿಎಂ ಸ್ಪಷ್ಟನೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button