
ಸಂತ್ರಸ್ತರಿಗಾಗಿ ಹೆಚ್ಚಿನ ಅನುದಾನ ತರುವೆ
ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರು :
ಸಚಿವ ಸ್ಥಾನ ನನಗೆ ಬಯಸದೆ ಬಂದ ಭಾಗ್ಯ. ಜಿಲ್ಲೆ ದೊಡ್ಡದಾಗಿದ್ದರಿಂದ ಜಿಲ್ಲೆಯಲ್ಲಿ ಹೈ ಕಮಾಂಡ್ ಇಬ್ಬರನ್ನು ಸಚಿವರನ್ನಾಗಿ ನೇಮಿಸಿದೆ ಎಂದು ನೂತನ ಸಚಿವ ಲಕ್ಷ್ಮಣ ಸವದಿ ಹೇಳಿದರು.
ಗುರುವಾರ ಅತೀವೃಷ್ಟಿ ಪ್ರವಾಹವನ್ನು ವೀಕ್ಷಿಸಲು ಕಿತ್ತೂರು ಕ್ಷೇತ್ರಕ್ಕೆ ಆಗಮಿಸಿದ ಸವದಿ ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾತನಾಡಿ, ಜಿಲ್ಲಾದ್ಯಂತ ಸಂತ್ರಸ್ತರ ನೆರವಿಗೆ ಸ್ಪಂದಿಸಲು ಪ್ರವಾಸ ಕೈಗೊಂಡಿದ್ದೆನೆ. ಸರ್ಕಾರ ತುರ್ತಾಗಿ ಪ್ರತಿ ಒಬ್ಬ ಸಂತ್ರಸ್ತರಿಗೆ ೧೦ ಸಾವಿರ ರೂ.ಗಳನ್ನು ಕೊಡಲು ಸರ್ಕಾರ ಜಿಲ್ಲಾಡಳಿತ ಕ್ಕೆ ತಿಳಿಸಿದೆ. ಈಗಾಗಲೆ ೩೮೦೦ ರೂ. ಕೊಟ್ಟವರಿಗೆ ಉಳಿದ ಹಣವನ್ನು ನಿಡಲಾಗುತ್ತದೆ.
ಸಂಪೂರ್ಣ ಬಿದ್ದ ಮನೆಗಳಿಗೆ ೫ ಲಕ್ಷ ರೂ. ಹಾಗೂ ಅವರು ಮನೆ ಕಟ್ಟಿಕೊಳ್ಳುವವರೆಗೆ ಬಾಡಿಗೆ ಮನೆಯಲ್ಲಿರಲು ೫ ಸಾವಿರ ರೂ.ಗಳನ್ನು ೧೦ ತಿಂಗಳ ವರೆಗೆ ಕೊಡಲಾಗುವುದು.ಸಂತ್ರಸ್ತರಿಗೆ ಧೈರ್ಯ ತುಂಬುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ರಾಜ್ಯ ಸರ್ಕಾರ ರೈತರ ಕಷ್ಟಕ್ಕೆ ಸ್ಪಂದಿಸುವ ಕಾರ್ಯ ಮಾಡುತ್ತಿದೆ. ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ನಮ್ಮದೇ ಸರ್ಕಾರ ಇರುವುದರಿಂದ ಹೆಚ್ಚಿನ ಅನುದಾನವನ್ನು ತರಿಸಿಕೊಂಡು ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ನೀಡಲಾಗುವುದು. ಜಿಲ್ಲೆಯ ಎಲ್ಲ ವಿಷಯಗಳನ್ನು ಕುರಿತು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಹೇಳಿದರು.
ಶಾಸಕ ಮಹಾಂತೇಶ ದೊಡಗೌಡರ ಮಾತನಾಡಿ, ಕ್ಷೇತ್ರದಲ್ಲಿ ಅತೀವೃಷ್ಟಿ ಪ್ರವಾಹಕ್ಕೆ ಸುಮಾರು ೫ ಸಾವಿರ ಮನೆಗಳು ಬಿದ್ದಿದೆ. ರೈತರು ಬೆಳೆಗಳನ್ನು ಹಾಳು ಮಾಡಿಕೊಂಡಿದ್ದಾರೆ. ಅಂತಾ ಜನರಿಗೆ ಹೆಚ್ಚಿನ ಆದ್ಯತೆ ನೀಡಿ ಅವರಿಗೆ ಪರಿಹಾರ ನೀಡಬೇಕು. ಕಿತ್ತೂರು ಪ್ರಾಧಿಕಾರವಾಗಿ ೭ ವರ್ಷವಾಗಿದೆ. ಅದಕ್ಕಾಗಿ ಸಿಎಂ ಯಡಿಯೂರಪ್ಪ ಅವರಲ್ಲಿ ೨ ಕೋಟಿ ರೂ ಅನುದಾನ ಕೇಳಿದ್ದೇನೆ ಎಂದರು.
ಇದಕ್ಕೂ ಮೊದಲು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರಯ ಚನ್ನಮ್ಮಾಜಿಯ ಮೂರ್ತಿಗೆ ಮಾಲಾರ್ಪಣೆ ಮಾಡಿದರು.
ಶಾಸಕರಾದ ಆನಂದ ಮಾಮನಿ, ಮಾಹಾಂತೇಶ ಕವಟಗಿಮಠ, ಮಾಜಿ ಶಾಸಕ ವಿಶ್ವನಾಥ ಪಾಟೀಲ, ಚಿನ್ನಪ್ಪ ಮುತ್ನಾಳ, ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ