Latest

ಹೆಚ್ಚು ಅಭ್ಯಾಸ ಹೆಚ್ಚು ಪ್ರಾವೀಣ್ಯತೆ!

ಜಯಶ್ರೀ ಜೆ. ಅಬ್ಬಿಗೇರಿ

ಎಲ್ಲೋ ಕೇಳಿದ ಕಥೆಯೊಂದು ಮನಃ ಪಟಲದ ಮೇಲೆ ಅಚ್ಚೊತ್ತಿದಂತಿದೆ. ಅದನ್ನು ತಾವೂ ಓದಿ. ಒಮ್ಮೆ ಒಬ್ಬ ಸಾಧು ಭದ್ರಿಕಾಶ್ರಮಕ್ಕೆ ಹೋಗುತ್ತಿದ್ದ. ಅವನ ಜೊತೆ ಇನ್ನೊಬ್ಬನು ಜತೆಯಾದ. ಭದ್ರಿಕಾಶ್ರಮ ತಲುಪಲು ಎಷ್ಟು ಸಮಯ ತಗಲಬಹುದು ಎಂದು ಆ ಮನುಷ್ಯ ಸಾಧುನನ್ನು ಕೇಳಿದ. ಸಾಧು ಉತ್ತರಿಸಲಿಲ್ಲ. ಸುಮ್ಮನೆ ಹೆಜ್ಜೆ ಹಾಕುತ್ತಿದ್ದ. ಒಂದು ಗಂಟೆ ಕಳೆದ ಮೇಲೆ ಸುಮಾರು ಏಳು ಗಂಟೆಯ ನಂತರ ಆಶ್ರಮ ತಲುಪಲು ಸಾಧ್ಯವಾಗುವುದು ಎಂದು ಉತ್ತರಿಸಿದ. ಒಂದು ತಾಸಿನ ಹಿಂದೆ ಕೇಳಿದ ಪ್ರಶ್ನೆಗೆ ಈಗ ಉತ್ತರಿಸುತ್ತಿದ್ದೀರಲ್ಲ ಸಾಧುಗಳೇ ಇಷ್ಟೊಂದು ಸಮಯವೇಕೆ ತೆಗೆದುಕೊಂಡಿರಿ ಮತ್ತೆ ಅಚ್ಚರಿಯಿಂದ ಪ್ರಶ್ನಿಸಿದ. ನೀನು ಪ್ರಯಾಣ ಪ್ರಾರಂಭಿಸಿದಾಗ ನಿನ್ನ ವೇಗವೆಷ್ಟು ಎಂಬುದು ನನಗೆ ಗೊತ್ತಿರಲಿಲ್ಲ. ಒಂದು ಗಂಟೆಗಿರುವ ನಿನ್ನ ವೇಗದ ಮಿತಿಯನ್ನು ಈಗ ತಿಳಿದುಕೊಂಡು ಉತ್ತರಿಸಿದೆ ಎಂದ. ನಾವು ಮಾಡುವ ಅಭ್ಯಾಸದ ಗತಿ ನಮ್ಮ ಪ್ರಾವೀಣ್ಯತೆಯ ಗತಿಯನ್ನು ನಿರ್ಧರಿಸುತ್ತದೆ ಎಂದ.

ಡೈರಿ ನಿರ್ವಹಿಸಿ

ಈ ಕಥೆ ಚಿಕ್ಕದಾದರೂ ಅದೆಷ್ಟು ಸುಂದರ ಸಂದೇಶವನ್ನು ನೀಡುತ್ತದೆ. ಎಲ್ಲವನ್ನೂ ಅಭ್ಯಾಸದಿಂದಲೇ ಪಡೆಯಲು ಸಾಧ್ಯ. ಅಭ್ಯಾಸದಿಂದಲೇ ಮುನ್ನಡೆಯಲು ಸಾಧ್ಯ. ಯೋಚನೆಗೆ ಹಚ್ಚುತ್ತದೆ. ಯಾವುದೇ ಚಿಂತೆಗಳ ಗೊಡವೆ ಇಲ್ಲದೇ ಸಾಧಿಸುವ ತುಡಿತವಿದ್ದರೆ ಪ್ರಬಲವಾಗಿ ಅಭ್ಯಾಸ ನಡಸಬೇಕು. ಅಭ್ಯಾಸದ ಗತಿಯ ವಿವರವನ್ನು ನೀಡುವ ಡೈರಿಯನ್ನು ನಿರ್ವಹಿಸಿ. ಸ್ವ ವಿಶ್ಲೇಷಣೆಯಿಂದ ತಪ್ಪುಗಳ ಲೆಕ್ಕ ದೊರೆಯುವುದು. ದೌರ್ಬಲ್ಯಗಳು ಅರಿವು ಮೂಡುವುದು. ಇವು ಮುಂದೆ ಹೋಗಿ ಎಡವುವುದನ್ನು ತಪ್ಪಿಸುತ್ತವೆ. ಈ ವಿಷಯಗಳಲ್ಲಿ ನಾನಿನ್ನೂ ಸುಧಾರಿಸಬೇಕು ಎನ್ನುವ ಸ್ಪಷ್ಟ ಚಿತ್ರಣ ದೊರೆಯುವುದು. ಆಮೇಲೆ ಸುಧಾರಿಸಬೇಕಾದ ವಿಷಯಗಳ ಮೇಲೆ ಕ್ರಿಯಾತ್ಮಕ ಯೋಜನೆಯನ್ನು ತಯಾರಿಸಿಕೊಂಡು ಅಭ್ಯಾಸಕ್ಕೆ ಮರಳಬಹುದು. ಮುಂಜಾನೆ ಸಮಯದಲ್ಲಿಯೇ ಅಂದು ಮಾಡಬೇಕಾದ ಅಭ್ಯಾಸದ (ಪ್ರ್ಯಾಕ್ಟೀಸ್) ಕುರಿತಾಗಿ ನೆನಪಿಸಿಕೊಳ್ಳಿ. ಯಾವ ಅಂಶಗಳ ಮೇಲೆ ಹೆಚ್ಚು ಕೇಂದ್ರೀಕರಿಸುವುದು ಎಂಬುದರ ಮೇಲೂ ಬೆಳಕು ಚೆಲ್ಲಿ. ಮತ್ತೆ ರಾತ್ರಿ ಸ್ವ ವಿಶ್ಲೇಷಣೆಗೆ ಸಮಯ ನಿಗದಿಸಿ. ತಪ್ಪುಗಳು ಎಲ್ಲಿ ಆದವು, ಹೇಗೆ ಆದವು ಎಂದು ಕಾಳಜಿಪೂರ್ವಕವಾಗಿ ಪರೀಕ್ಷಿಸಿಕೊಂಡು ಮುನ್ನಡೆಯಬೇಕು. ನಿಮ್ಮ ತಪ್ಪುಗಳನ್ನು ನೀವೇ ತಿದ್ದಿಕೊಂಡು ನಡೆಯಲು ಇರುವ ಅತ್ಯುತ್ತಮ ಮಾರ್ಗವಿದು. ಎಷ್ಟೇ ಉನ್ನತ ಗುರಿಯಾಗಿದ್ದರೂ ಈ ದಿಶೆ ಅಲ್ಲಿಗೆ ಕರೆದೊಯ್ಯುವುದು ಖಚಿತ.

ವೈದ್ಯಕೀಯ ವಿಜ್ಞಾನದ ಹೇಳಿಕೆ

ವೈದ್ಯಕೀಯ ವಿಜ್ಞಾನದ ಹೇಳಿಕೆಯ ಪ್ರಕಾರ ಪುನರಾವರ್ತಿಸಿದ ಅಭ್ಯಾಸವು ಮೆದುಳಿನಲ್ಲಿ ಮಾರ್ಗವೊಂದನ್ನು ತಯಾರಿಸುತ್ತದೆ. ಸಂಪೂರ್ಣ ನ್ಯೂರಾಪ್ಲಾಸ್ಟಿಸಿಟಿ ಇದರ ಮೇಲೆ ಅವಲಂಬಿತವಾಗಿದೆ. ನಿರ್ಧಿಷ್ಟ ಗುರಿಯೊಂದಿಗೆ ದಿನ ನಿತ್ಯ ನೀವು ಪುನರಾವರ್ತಿಸುವ ಅಭ್ಯಾಸಗಳು ಕಠಿಣವಾದುದನ್ನು ಸರಳವಾಗಿಸುತ್ತವೆ. ನಿಧಾನ ಮತ್ತು ಸ್ಥಿರವಾದ ಅಭ್ಯಾಸದ ಮೂಲಕ ಮನಸ್ಸಿನ ಮೇಲೆ ವಿಜಯ ಸಾಧಿಸಲು ಸಾಧ್ಯ. ನಿಮ್ಮ ಅತ್ಯುತ್ತಮ ಪ್ರಯತ್ನಗಳ ಅಭ್ಯಾಸಗಳು ನಿಮ್ಮ ಗುರಿಯ ಶಿಖರಕ್ಕೆ ತಲುಪಿಸುವವು.

ಸುಲಭ -ಕಠಿಣ

ಇಂದು ಸುಲಭವಾಗಿರುವುದೆಲ್ಲ ಹಿಂದೊಂದು ದಿನ ಕಠಿಣವಾಗಿತ್ತು ಎಂಬುದು ಅಪ್ಪಟ ಸತ್ಯವಾದ ಮಾತು. ಸತತ ಅಭ್ಯಾಸದಿಂದ ಜಟಿಲವೆನಿಸಿದ್ದು ಬರಬರುತ್ತ ಎಡಗೈ ಕೆಲಸವಾಗುವುದು. ಅಂದ್ಹಾಗೆ ಚಿಕ್ಕವರಿರಾಗಿರುವಾಗ ಒಂದೆಡೆಯಿಂದ ಇನ್ನೊಂದೆಡೆ ಹೊರಳುವುದು ಕಠಿಣವೆನಿಸುತ್ತಿತ್ತು. ಕುಳಿತುಕೊಳ್ಳಲು, ನಿಲ್ಲಲು, ನಡೆಯಲು ನಾವೆಲ್ಲ ಕಲಿತಿದ್ದು ಅಭ್ಯಾಸದಿಂದಲೇ ಅಲ್ಲವೇ? ಇವೆಲ್ಲ ಕಲಿಯುವಾಗ ಅದೆಷ್ಟು ಸಲ ಬೀಳಲಿಲ್ಲ ಮೊಣಕಾಲು ಕೆತ್ತಲಿಲ್ಲ. ತಲೆಗೆ ಗಾಯವಾಗಲಿಲ್ಲ, ಅದಕೆಲ್ಲ ಲೆಕ್ಕವಿಲ್ಲ ಅಲ್ಲವೇ? ಹಾಗಂತ ನಾವು ಕಲಿಯುವುದನ್ನು ನಿಲ್ಲಿಸಿದೆವೆಯೇ? ಇಲ್ಲವಲ್ಲ. ಬೀಳುವುದು ಏಳುವುದು ಕಲಿಕೆಯ ಒಂದು ಭಾಗ ಎಂದು ಓಡುವುದನ್ನು ಕಲಿತೆವು ಕೆಲವರಂತೂ ಓಟದಲ್ಲಿ ಓಲಿಂಪಿಕ್ಸ್ ಚಿನ್ನದ ಪದಕ ಪಡೆಯುವಷ್ಟು ಪ್ರಾವಿಣ್ಯತೆ ಪಡೆದರು.

ನೀವೀಗ ಅಭ್ಯಸಿಸಲು ಹಂಬಲಿಸುತ್ತಿರುವಿರಾ? ನಾನು ಎಲ್ಲಿಗೆ ಹೋಗುತ್ತಿದ್ದೇನೆ. ಯಾವ ಹಾದಿಯಲ್ಲಿ ಹೋಗುತ್ತಿದ್ದೇನೆ. ಮುಂದೆ ಹೋಗುವ ದಾರಿ ಯಾವುದು? ಅದರ ಯೋಜನೆಗಳೇನು? ಎಂಬೆಲ್ಲ ಪ್ರಶ್ನೆಗಳನ್ನು ನಮಗೆ ನಾವೇ ಹಾಕಿಕೊಳ್ಳಬೇಕು. ಅಭ್ಯಾಸದ ಅನುಭವ ಜಗತ್ತಿನ ಸರ್ವಶ್ರೇಷ್ಠ ಶಿಕ್ಷಕ ಉಸಿರಾಡುವವರೆಗೂ ಕಲಿಕೆ ಮತ್ತು ಪ್ರಾವೀಣ್ಯತೆ ಪಡೆಯುವುದು ಜೀವನದ ಪರಮೋಚ್ಛ ಗುರಿಯಾಗಿರಬೇಕು. ಕಲಿಯುವುದು ಅಭ್ಯಾಸದಲ್ಲಿ ತೊಡುವುದೇ ಪ್ರಾವೀಣ್ಯತೆ ಪಡೆಯುವ ರಹಸ್ಯಗಳು. ನಾವೆಷ್ಟು ತುಡಿತದಿಂದ ಹೆಚ್ಚು ಹೊತ್ತು ಅಭ್ಯಾಸದಲ್ಲಿ ತೊಡಗಿಸಿಕೊಳ್ಳುತ್ತಿರೋ ಅಷ್ಟೇ ಬೇಗ ನಾವು ಪ್ರವೀಣರಾಗುವೆವು ಎಂಬುದರಲ್ಲಿ ಎರಡು ಮಾತಿಲ್ಲ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button