
ರಮೇಶ್ ಜಾರಕಿಹೊಳಿ ದಬ್ಬಾಳಿಕೆ !
ಪ್ರಗತಿವಾಹಿನಿ ಸುದ್ದಿ – ಬೆಂಗಳೂರು : ಮಾಧ್ಯಮಗಳೊಂದಿಗೆ ಮಾತನಾಡಿದ ದಿನೇಶ್ ಗುಂಡೂರಾವ್ ಅವರು ಬೆಳಗಾವಿಯ ನೆರೆಯ ಬಗ್ಗೆ ಮಾತನಾಡಿ, ಜಾನುವಾರು, ಬೆಳೆ, ಆಸ್ತಿಪಾಸ್ತಿಗಳ ನಷ್ಟ ಸಂಭವಿಸಿದೆ, ಬಹುಶಃ ಇಷ್ಟು ದೊಡ್ಡ ನಷ್ಟ ಸಂಭವಿಸಿರುವುದು ಈ ಕಳೆದ ವರ್ಷಗಳಲ್ಲಿ ಇದೇ ಮೊದಲಿರಬಹುದು, ಸಮಸ್ಯೆಯನ್ನು ಸೂಕ್ಷ್ಮವಾಗಿ ಪರಿಗಣಿಸಿ ರಾಜ್ಯ ಸರ್ಕಾರ ಹೆಚ್ಚಿನ ಗಮನ ಕೊಟ್ಟು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದರು.
ಈಗಾಗಲೇ ಮಾನ್ಯ ಮುಖ್ಯಮಂತ್ರಿಗಳು ಸಮೀಕ್ಷೆ ನಡೆಸಿದ್ದಾರೆ ಆದರೂ ಇನ್ನೂ ಹೆಚ್ಚಿನ ನೆರವನ್ನು ಕೇಂದ್ರದಿಂದ ತರುವಂತಾಗಬೇಕು ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಒಂದೇ ಸರಕಾರವಿರುವುದರಿಂದ ಮಲತಾಯಿ ಧೋರಣೆ ಬಿಟ್ಟು ಇನ್ನಷ್ಟು ನೆರವಿಗೆ ಮುಂದಾಗಬೇಕು ಎಂದರು.
ಸಂಪುಟ ರಚನೆಯ ಬಗ್ಗೆ ಮಾತನಾಡಿದ ಅವರು ರಾಜ್ಯದ ದುರ್ದೈವ ರಾಜ್ಯದಲ್ಲಿ ಏಕ ಚಕ್ರಾಧಿಪತ್ಯ ನಡೀತಾ ಇದೆ, ಯಾವುದೇ ಮಂತ್ರಿಗಳಿಲ್ಲ ಆಡಳಿತ ಚುಕ್ಕಾಣಿ ಹಿಡಿಯಲು ಆತುರ ಪಟ್ಟ ಮುಖ್ಯಮಂತ್ರಿಗಳಿಗೆ ಸಂಪುಟ ರಚನೆಯ ಬಗ್ಗೆ ಕಾಳಜಿ ಇಲ್ಲ ಎಂದರು, ಕೂಡಲೇ ಮಂತ್ರಿ ಮಂಡಲ ರಚನೆಯಾಗಬೇಕೆಂದು ಅವರು ಒತ್ತಾಯಿಸಿದರು.
ರಮೇಶ್ ಜಾರಕಿಹೊಳಿ ಯಿಂದ ಪಕ್ಷಕ್ಕೆ ದ್ರೋಹ..
ಇನ್ನು ಬೆಳಗಾವಿಯ ರಾಜಕೀಯ ಬೆಳವಣಿಗೆಯ ಬಗ್ಗೆ ಮಾತನಾಡಿದ ದಿನೇಶ್ ಗುಂಡೂರಾವ್ ಅವರು ಈಗಾಗಲೇ ಗೋಕಾಕ ಕ್ಷೇತ್ರದಿಂದ ಇನ್ನೂರಕ್ಕೂ ಹೆಚ್ಚು ಕಾರ್ಯಕರ್ತರುಗಳು ಬೆಂಗಳೂರಿಗೆ ಬಂದು ತನ್ನನ್ನು ಭೇಟಿಯಾಗಿದ್ದಾರೆ ಹಾಗೂ ಕ್ಷೇತ್ರದಲ್ಲಿ ರಮೇಶ್ ಜಾರಕಿ ಹೊಳಿ ಅವರ ದಬ್ಬಾಳಿಕೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ, ನಮ್ಮ ಪಕ್ಷದ ಋಣವನ್ನು ತಿಂದು ಪಕ್ಷಕ್ಕೆ ದ್ರೋಹ ಬಗೆದಿರುವುದು ಕಾರ್ಯಕರ್ತರಿಗೆ ತಿಳಿದಿದೆ, ಅವರ ವಿರುದ್ಧ ಹೋರಾಡಲು ಸಿದ್ಧರಿದ್ದೇವೆ ಎಂದು ಸುಮಾರು ಇನ್ನೂರು ಕಾರ್ಯಕರ್ತರುಗಳು ತಿಳಿಸಿದ್ದಾರೆ ಎಂದರು.
ರಾಜಕೀಯ ವ್ಯಭಿಚಾರಿಗಳ ವಿರುದ್ಧ ಜನ ತಿರುಗಿ ಬಿಳಲಿದ್ದಾರೆ..
ಈಗಾಗಲೇ ಶಿವಾನಂದ ಪಾಟೀಲರ ಸಮಿತಿಯನ್ನು ರಚಿಸಲಾಗಿದ್ದು ಸದ್ಯ ಅವರು ಶೀಘ್ರದಲ್ಲೇ ಗೋಕಾಕ್ ಗೆ ಭೇಟಿಯಾಗಲಿದ್ದಾರೆ ಎಂದ ಅವರು, ನಮ್ಮ ಪಕ್ಷದಲ್ಲೇ ಬೆಳೆದು ಪಕ್ಷಕ್ಕೆ ಮೋಸ ಮಾಡಿದವರಿಗೆ ಶೀಘ್ರ ಪಾಠ ಕಲಿಸಲಾಗುತ್ತದೆ, ಆದ್ದರಿಂದ ಕಾರ್ಯಕರ್ತರು ಅದನ್ನು ಧೈರ್ಯದಿಂದ ಎದುರಿಸಲು ಸೂಚಿಸಲಾಗಿದೆ ಹಾಗೂ ಅವರೆಲ್ಲರೂ ಧೈರ್ಯದಿಂದ ಎದುರಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದರು.
ಯಾರು ಪಕ್ಷಕ್ಕೆ ಮೋಸ ಮಾಡಿದ್ದಾರೆ, ಯಾರು ರಾಜಕೀಯ ವ್ಯಭಿಚಾರಿಗಳಾಗಿದ್ದಾರೆ, ಅವರ ವಿರುದ್ಧ ಜನ ತಿರುಗಿ ಬೀಳಲಿದ್ದಾರೆ ಎಂದು ತಿಳಿಸಿದರು.////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ