ಪ್ರಗತಿವಾಹಿನಿ ಸುದ್ದಿ, ಲಕ್ನೋ: ಜಾಗತಿಕವಾಗಿ ಏಡ್ಸ್ ಸೋಂಕು ಮತ್ತೆ ಇಣುಕು ಹಾಕುತ್ತಿದೆ. ಉತ್ತರ ಪ್ರದೇಶದ ಮೀರತ್ ನಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 81 ಗರ್ಭಿಣಿಯರಲ್ಲಿ ಏಡ್ಸ್ ಸೋಂಕು ಕಂಡುಬಂದಿದೆ.
ಮೀರತ್ನ ಲಾಲಾ ಲಜಪತ್ ರಾಯ್ ಮೆಡಿಕಲ್ ಕಾಲೇಜಿನ ಆ್ಯಂಟಿ ರೆಟ್ರೋ ವೈರಸ್(ATR) ಥೆರಪಿ ಕೇಂದ್ರ ನೀಡಿದ ವರದಿಯಿಂದಾಗಿ ಗರ್ಭಿಣಿಯರು ಸೋಂಕಿಗೆ ತುತ್ತಾಗಿರುವ ವಿಷಯ ಬೆಳಕಿಗೆ ಬಂದಿದೆ. ಸೋಂಕಿತ ಗರ್ಭಿಣಿಯರನ್ನು ಆ್ಯಂಟಿ ರೆಟ್ರೋ ಥೆರಪಿಗೆ ಒಳಪಡಿಸಿದಾಗ ಅವರಲ್ಲಿ ಸೋಂಕು ದೃಢಪಟ್ಟಿದೆ.
2022-23ರ ಅವಧಿಯಲ್ಲಿ ಸೋಂಕು ಹೆಚ್ಚಾಗಿ ವ್ಯಾಪಿಸಿದ್ದು, ಇದು ಹೇಗೆ ವ್ಯಾಪಿಸಿದೆ ಎಂಬುದು ಇನ್ನೂ ಬಹಿರಂಗವಾಗಿಲ್ಲ. ಲೈಂಗಿಕ ಸಂಪರ್ಕ ಅಥವಾ ಇಂಜೆಕ್ಷನ್ ಸಿರಿಂಜ್ ಗಳಿಂದಲೂ ಬಂದಿರಬಹುದೆಂದು ಆರಂಭಿಕವಾಗಿ ಊಹಿಸಲಾಗಿದೆ. ಸೋಂಕಿತರಿಗೆ ಸರಕಾರದ ವತಿಯಿಂದ ಚಿಕಿತ್ಸೆ ನೀಡಲಾಗುತ್ತಿದೆ. ಜನಿಸಿದ ಮಕ್ಕಳಿಗೆ 18 ತಿಂಗಳು ಪೂರ್ಣಗೊಂಡ ನಂತರ ಎಚ್ಐವಿ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ಆರೋಗ್ಯ ಇಲಾಖೆ ವತಿಯಿಂದ ತಂಡ ಒಂದನ್ನು ರಚಿಸಲಾಗಿದ್ದು, ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ವೈದ್ಯಾಧಿಕಾರಿ ಅಖಿಲೇಶ್ ಮೋಹನ್ ಪ್ರಸಾದ್ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ