
ಪ್ರಗತಿವಾಹಿನಿ ಸುದ್ದಿ: ಮಹಿಳೆಯೊಬ್ಬಳು ಹೆತ್ತ ಮಕ್ಕಳನ್ನು ಟಬ್ ನಲ್ಲಿ ಮುಳುಗಿಸಿ ಹತ್ಯೆಗೈದ ಘಟನೆ ಬೆಳಕಿಗೆ ಬಂದಿದೆ. ತನ್ನ ಮೂವರು ಪುಟ್ಟ ಮಕ್ಕಳನ್ನು ಬಾತ್ ಟಬ್ ನಲ್ಲಿ ಮುಳುಗಿಸಿ ಕೊಲೆ ಮಾಡಿದ್ದು, ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಹೈದರಾಬಾದ್ ಮೂಲದ ಮಹಿಳೆ ಸೌದಿ ಅರೇಬಿಯಾದ ಅಲ್ ಖೋಬರ್ ನಗರದಲ್ಲಿ ಈ ಕೃತ್ಯವೆಸಗಿದ್ದಾಳೆ. ಸೈಯದಾ ಹುಮೇರಾ ಅಮ್ರಿನ್ ಮಕ್ಕಳನ್ನು ಕೊಲೆಗೈದಿರುವ ಮಹಿಳೆ. ಏಳು ವರ್ಷದ ಅವಳಿ ಪುತ್ರರಾದ ಸಾದಿಕ್ ಅಹ್ಮದ್, ಅದೆಲ್ ಅಹ್ಮದ್ ಹಾಗೂ ಮೂರು ವರ್ಷದ ಯೂಸುಫ್ ಅಹ್ಮದ್ ಕೊಲೆಯಾದ ಮಕ್ಕಳು.
ಸೈಯದಾ ಹುಮೇರಾ ಪತಿ ಮೊಹಮ್ಮದ್ ಕೆಲಸದಿಂದ ಮನೆಗೆ ವಾಪಾಸ್ ಆದಾಗ ಮೂವರು ಮಕ್ಕಳು ಟಬ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆಘಾತಕ್ಕೊಳಗಾದ ಮೊಹಮ್ಮದ್ ಸೌದಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಸೈಯದಾಳನ್ನು ಬಂಧಿಸಿದ್ದಾರೆ. ಕೌಟುಂಬಿಕ ಕಲಹಕ್ಕೆ ಬೇಸತ್ತು ಹೆತ್ತ ತಾಯಿಯೇ ಮಕ್ಕಳನ್ನು ಕೊಲೆ ಮಾಡಿದ್ದಾಳೆ ಎನ್ನಲಾಗಿದೆ.