Kannada NewsKarnataka NewsLatest

*ಮಗಳನ್ನು ಕತ್ತುಹಿಸುಕಿ ಕೊಂದು ಆತ್ಮಹತ್ಯೆಗೆ ಯತ್ನಿಸಿದ ತಾಯಿ*

ಪ್ರಗತಿವಾಹಿನಿ ಸುದ್ದಿ: ಪತಿ-ಪತ್ನಿ ನಡುವುನ ಜಗಳದಲ್ಲಿ ಹೆತ್ತ ಮಗಳನ್ನೇ ತಾಯಿ ಹತ್ಯೆಗೈದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

5 ವರ್ಷದ ಮಗಳು ಸಿರಿ ತಾಯಿಯಿಂದಲೇ ಕೊಲೆಯಾಗಿದ್ದಾಳೆ. ಪತಿ ಪತ್ನಿ ನಡುವೆ ಆರಂಭವಾದ ಜಗಳ ತಾರಕ್ಕೇರಿದ್ದು ಈ ವೇಳೆ ಕೋಪಗೊಂಡು ರೂಮ್ ಬಾಗಿಲು ಹಾಕಿದ್ದ ತಾಯಿ ಮಹಾಲಕ್ಷ್ಮೀ 5 ವರ್ಷದ ಮಗಳ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಗಲಾಟೆ ಕೇಳಿ ಸ್ಥಳಕ್ಕೆ ಧಾವಿಸಿದ ಅಕ್ಕ-ಪಕ್ಕದ ನಿವಾಸಿಗಳು ಮಹಾಲಕ್ಷ್ಮೀಯನ್ನು ರಕ್ಷಿಸಿದ್ದಾರೆ. ಆಕೆಯ ಸ್ಥಿತಿಯೂ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರಿನ ಉತ್ತರ ಲಕ್ಕಸನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. 8 ವರ್ಷಗಳ ಹಿಂದೆ ಜಯರಾಮ್ ಹಾಗೂ ಮಹಾಲಕ್ಷ್ಮೀ ಪ್ರೀತಿಸಿ ಮದುವೆಯಾಗಿದ್ದರು. ಎರಡೂ ಕುಟುಂಬಗಳ ವಿರೋಧದ ನಡುವೆಯೂ ವಿವಾಹವಾಗಿದ್ದರಿಂದ ಮನೆಯಿಂದ ದೂರವಾಗಿದ್ದರು. ಆದರೆ ಇಬ್ಬರು ಕೆಲಸಕ್ಕೆ ಹೋಗುತ್ತಿದ್ದುದರಿಂದ ಪ್ರಾರಂಭದಲ್ಲಿ ಪತಿ-ಪತ್ನಿ ಚನ್ನಾಗಿಯೇ ಇದ್ದರು. ದಂಪತಿಗೆ ಐದು ವರ್ಷದ ಮಗಳಿದ್ದಾಳೆ. ಮಗಳನ್ನು ನೋಡಿಕೊಳ್ಳಬೇಕೆಂದು ಮಹಾಲಕ್ಷ್ಮೀ ತನ್ನ ಕೆಲಸವನ್ನೂ ಬಿಟ್ಟಿದ್ದಳು. ಆದರೆ ಕೆಲ ವರ್ಷದಿಂದ ಕುಡಿತದ ದಾಸನಾಗಿದ್ದ ಪತಿ ಜಯರಾಂ ಕಳೆದ ಒಂದುವರೆ ವರ್ಷದಿಂದ ಕೆಲಸವನ್ನು ಬಿಟ್ಟು ಮನೆಯಲ್ಲಿಯೇ ಇದ್ದ. ಎಷ್ಟು ಹೇಳಿದರೂ ಕೆಲಸಕ್ಕೂ ಹೋಗುತ್ತಿರಲಿಲ್ಲ. ಬರ ಬರುತ್ತ ಆರ್ಥಿಕ ಸಂಕಷ್ಟ ಹೆಚ್ಚಾಗಿತ್ತು.

ದುಡಿದು ಪತ್ನಿ-ಮಗಳನ್ನು ನೋಡಿಕೊಳ್ಳಬೇಕಾದ ಪತಿ ಕೆಲಸವನ್ನೂ ಬಿಟ್ಟು, ಕುಡಿತದ ದಾಸನಾಗಿದ್ದು, ದಿನಸಿ ಸಾಮಾನುಗಳಿಗೂ ಮನೆಯಲ್ಲಿ ಸಂಕಷ್ಟ ಎದುರಾಗಿತ್ತು. ಇದೇ ಕಾರಣಕ್ಕೆ ಪತಿ-ಪತ್ನಿ ನಡುವೆ ಆಗಾಗ ಜಗಳವಾಗುತ್ತಿತ್ತು. ಮನೆಗೆ ದಿನಸಿ ತರುವುದನ್ನು ಬಿಟ್ಟು ನಿನ್ನೆ ರಾತ್ರಿ ಕುಡಿದು ಬಂದಿದ್ದ ಪತಿಯನ್ನು ಕಂಡು ಮಹಾಲಕ್ಷ್ಮಿ ಜಗಳವಾಡಿದ್ದಾಳೆ. ಇಬ್ಬರ ನಡಿವೆ ಜಗಳ ವಿಕೋಪಕ್ಕೆ ತಿರುಗಿದೆ. ಮಗಳು ರೂಮಿನಲ್ಲಿ ನಿದ್ದೆಗೆ ಜಾರಿದ್ದಳು. ಈ ವೇಳೆ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡ ಮಹಾಲಕ್ಷ್ಮೀ ಮಗಳ ಕತ್ತು ಹಿಸುಕಿ ಕೊಲೆಗೈದು ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆದರೆ ವಿಷಯ ತಿಳಿದು ಸ್ಥಳೀಯರು ಮಹಾಲಕ್ಷ್ಮಿಯನ್ನು ರಕ್ಷಿಸಿದ್ದಾರೆ. ಮಗಳು ಸಿರಿ ಸಾವನ್ನಪ್ಪಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

Home add -Advt

Related Articles

Back to top button