
ಪ್ರಗತಿವಾಹಿನಿ ಸುದ್ದಿ: ಅಪ್ರಾಪ್ತ ಮಗಳು ತನ್ನ ಅಪ್ರಾಪ್ತ ಪ್ರಿಯಕರ ಹಾಗೂ ಆತನ ಸ್ನೇಹಿತರ ಜೊತೆ ಸೇರಿ ಹೆತ್ತ ತಾಯಿಯನ್ನೇ ಹತ್ಯೆಗೈದು ಬಳಿಕ ಆತ್ಮಹತ್ಯೆ ಎಂದು ಬಿಂಬಿಸಲು ಹೀಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ.
ಬೆಂಗಳೂರಿನ ಉತ್ತರಹಳ್ಳಿಯಲ್ಲಿ ಈ ಘಟನೆ ನಡೆದಿದೆ. ನೇತ್ರಾವತಿ (34) ಮಗಳಿಂದಲೇ ಕೊಲೆಯಾದ ತಾಯಿ. ಅಪ್ರಾಪ್ತ ಮಗಳು ಆಗಾಗ ತನ್ನ ಪ್ರಿಯಕರ ಹಾಗೂ ಸ್ನೇಹಿತರನ್ನು ಮನೆಗೆ ಕರೆತರುತ್ತಿದ್ದಳು. ಕಳೆದ ಶನಿವಾರ ತಾಯಿ ಇದನ್ನು ಪ್ರಶ್ನಿಸಿದ್ದಾರೆ. ಈ ವೇಳೆ ತಾಯಿ, ಮಗಳು ಹಾಗೂ ಪ್ರಿಯಕರನ ನಡುವೆ ಗಲಾಟೆಯಾಗಿದೆ.
ಜಗಳ ವಿಕೋಪಕ್ಕೆ ತಿರುಗಿದ್ದು, ಟವೆಲ್ ನಿಂದ ತಾಯಿಯ ಬಾಯಿಯನ್ನು ಮಗಳು ಹಾಗೂ ಆಕೆಯ ಪ್ರಿಯಕರ, ಸ್ನೇಹಿತರು ಕಟ್ಟಿದ್ದಾರೆ. ಈ ವೇಳೆ ಅಸ್ವಸ್ಥಗೊಂಡ ತಾಯಿ ಪ್ರಜ್ಞೆ ಕಳೆದುಕೊಂಡಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತಾಯಿ ಸಾವನ್ನಪ್ಪುತ್ತಿದ್ದಂತೆ ಆತ್ಮಹತ್ಯೆ ಎಂದು ಬಿಂಬಿಸಲು ತಾಯಿ ಮೃತದೇಹವನ್ನು ಫ್ಯಾನ್ ಗೆ ನೇಣು ಹಾಕಿಕೊಂಡಂತೆ ಬಿಂಬಿಸಿದ್ದಾರೆ. ಬಳಿಕ ಮನೆ ಲಾಕ್ ಮಾಡಿ ಮಗಳು, ಪ್ರಿಯಕರ ಹಾಗೂ ಸ್ನೇಹಿತರ ಗ್ಯಾಂಗ್ ಎಸ್ಕೇಪ್ ಆಗಿದೆ.
ಮಗಳಿದ್ದರೂ ತಾಯಿಯ ಅಂತ್ಯಕ್ರಿಯೆಗೂ ಮಗಳು ಬಂದಿಲ್ಲ. ಸಂಬಂಧಿಕರ ಕೇಳಿದರೆ ಮಗಳು ಎಲ್ಲಿದ್ದಾಳೆಂಬ ಬಗ್ಗೆ ಗೊತ್ತಿಲ್ಲ ಎನ್ನುತ್ತಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆಯಲ್ಲಿಯೂ ಕೊಲೆ ರಹಸ್ಯ ಬಯಲಾಗಿದೆ. ಅನುಮಾನಗೊಂಡ ಪೊಲೀಸರು ಮಗಳನ್ನು ಹಾಗೂ ಆಕೆಯ ಪ್ರಿಯಕರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ನೇತ್ರಾವತಿ ಹತ್ಯೆ ಪ್ರಕರಣದಲ್ಲಿ ಮಗಳು, ಆಕೆಯ ಪ್ರಿಯಕರ, ಮೂವರು ಸ್ನೇಹಿತರು ಸೇರಿ ಐವರು ಅಪ್ರಾಪ್ತರ ಗ್ಯಾಂಗ್ ಬಂಧಿಸಲಾಗಿದೆ.
 
					 
				 
					 
					 
					 
					
 
					 
					 
					


