ಯಶವಂತಪುರದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನುಳ್ಳ 600 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಬೆಂಗಳೂರಿನ ಆಸ್ಟರ್ ಡಿಎಂ ಆಸ್ಪತ್ರೆಯೊಂದಿಗೆ ಕೆಎಲ್‌ಇ ಸಂಸ್ಥೆ ಬೃಹತ್ ಒಪ್ಪಂದ ಒಂದಕ್ಕೆ ಸಹಿ ಮಾಡಿವೆ. ವೈದ್ಯಕೀಯ ಕ್ಷೇತ್ರದಲ್ಲಿ ದಿಗ್ಗಜರಾದ ದುಬೈ ಮೂಲದ ಪ್ರತಿಷ್ಠಿತ ಆಸ್ಪತ್ರೆ ಆಸ್ಟರ್ ಡಿಎಂ ಹಾಗೂ ಕೆಎಲ್‌ಇ ಸಂಸ್ಥೆಯು ಕೂಡಿಕೊಂಡು ಬೆಂಗಳೂರಿನ ಯಶವಂತಪುರದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನುಳ್ಳ ೬೦೦ ಹಾಸಿಗೆಗಳ ಆಸ್ಪತ್ರೆಯನ್ನು ನಿರ್ಮಿಸಲು ಒಡಂಬಡಿಕೆಗೆ ಸಹಿ ಹಾಕಿವೆ. ಈ ಆಸ್ಪತ್ರೆಯು ೨೦೨೪ರ ವೇಳೆಗೆ ಕಾರ್ಯಾರಂಭ ಮಾಡಲಿದೆ.
ಬೆಂಗಳೂರಿನಲ್ಲಿ ಇಂದು ನಡೆದ ಸಮಾರಂಭದಲ್ಲಿ ಆಸ್ಟರ್ ಡಿಎಂ ಹೆಲ್ತ್‌ಕೇರ್ ಸಂಸ್ಥಾಪಕ ಅಧ್ಯಕ್ಷ ಡಾ.ಆಜಾದ ಮೂಪೆನ್ ಹಾಗೂ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆಯವರು ಒಡಂಬಡಿಕೆಗೆ ಸಹಿ ಹಾಕಿದರು.
ಕೆಎಎಲ್ಇ ಸಾಧನೆ
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಪ್ರಭಾಕರ ಕೋರೆ, ಕೆಎಲ್‌ಇ ಸಂಸ್ಥೆಯು ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಸದಾ ಒಂದು ಹೆಜ್ಜೆ ಮುಂದಿಡುತ್ತಿದ್ದು, ಅತ್ಯಾಧುನಿಕವಾದ ವೈದ್ಯಕೀಯ ಸೇವೆಯನ್ನು ನೀಡುವಲ್ಲಿ ನಿರತವಾಗಿದೆ. ಬೆಳಗಾವಿಯ ಕೆಎಲ್‌ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಬಹುಅಂಗಾಂಗಗಳ ಕಸಿ ಕಾರ್ಯವನ್ನು ಈಗಾಗಲೇ ಯಶಸ್ವಿಯಾಗಿ ಮಾಡುತ್ತಿದೆ ಎಂದರು.
ಅಲ್ಲದೇ ಹೃದಯ ಕಸಿಯನ್ನು ಉತ್ತರ ಕನಾರ್ಟಕದಲ್ಲಿ ಪ್ರಥಮ ಬಾರಿಗೆ ನೆರವೇರಿಸಲಾಗಿದೆ. ಸಂಸ್ಥೆಯು ೪೦೦೦ ಕ್ಕೂ ಅಧಿಕ ಹಾಸಿಗೆಗಳುಳ್ಳ ಸುಸಜ್ಜಿತ ಆಸ್ಪತ್ರೆಗಳ ಮೂಲಕ ಗುಣಮಟ್ಟದ ವೈದ್ಯಕೀಯ ಸೇವೆಯನ್ನು ಕೈಗೆಟುಕುವ ದರದಲ್ಲಿ ಈಗಾಗಲೇ ನೀಡುತ್ತಿದೆ ಎಂದು ಹೇಳಿದರು.
ಕೆಎಲ್‌ಇ ಸಂಸ್ಥೆಯು ವಿಶ್ವದ ಅಗ್ರಮಾನ್ಯ ವಿಶ್ವವಿದ್ಯಾಲಯ ಹಾಗೂ ವೈದ್ಯಕೀಯ ಕ್ಷೇತ್ರದ ಹೆಸರಾಂತ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ವೈದ್ಯಕೀಯ ಸೇವೆಯನ್ನು ವಿಸ್ತರಿಸುತ್ತಿದೆ. ೨೭೦ ಕ್ಕೂ ಅಧಿಕ ಅಂಗಸಂಸ್ಥೆಗಳನ್ನು ಹೊಂದಿರುವ ಕೆಎಲ್‌ಇ ಸಂಸ್ಥೆಯು ಜಾಗತಿಕವಾಗಿ ಮನ್ನಣೆ ಗಳಿಸಿದೆ. ಬೆಂಗಳೂರು ಹಾಗೂ ಸುತ್ತಲಿನ ಜನತೆಗೆ ವೈದ್ಯಕೀಯ ಸೇವೆ ಕಲ್ಪಿಸಲು ಕಂಕಣಬದ್ಧವಾಗಿ ಆಸ್ಟರ್ ಡಿಎಂ ಆಸ್ಪತ್ರೆಯೊಂದಿಗೆ ಸೇರಿಕೊಂಡು ಆಸ್ಪತ್ರೆಯನ್ನು ನಿರ್ಮಿಸುತ್ತಿದೆ.
ಡಾ.ಮುಪೇನ್ ಆಜಾದ ಅವರು ಮಾತನಾಡಿ, ವಿಶ್ವದಾದ್ಯಂತ ಹೆಸರು ಮಾಡಿರುವ ಕೆಎಲ್‌ಇ ಸಂಸ್ಥೆಯೊಂದಿಗೆ ಒಡಗೂಡಿ ವೈದ್ಯಕೀಯ ಸೇವೆ ನೀಡಲು ಒಪ್ಪಂದ ಮಾಡಿಕೊಂಡಿರುವುದು ಅತ್ಯಂತ ತೃಪ್ತಿದಾಯಕವಾಗಿದೆ ಎಂದರು.
ಈ ಸಂದರ್ಭದಲ್ಲಿ ಆಸ್ಟರ್ ಡಿಎಂ ಹೆಲ್ತ್ ಕೇರ ಗ್ರುಪ್‌ನ ಸಿಎಫ್‌ಒ ಶ್ರೀ ಶ್ರೀನಾಥ ರೆಡ್ಡಿ, ಆಸ್ಟರ್ ಇಂಡಿಯಾ ಸಿಇಒ ಡಾ.ಹರೀಶ ಪಿಳೈ, ಬೆಂಗಳೂರಿನ ಆಸ್ಟರ್ ಹಾಸ್ಪಿಟಲ್ಸ್ ಸಿಇಒ ಡಾ.ನಿತೀಶ ಶೆಟ್ಟಿ, ಕೆಎಲ್‌ಇ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಕಾಹೇರನ್ ಕುಲಸಚಿವರಾದ ಡಾ.ವಿ.ಡಿ.ಪಾಟೀಲ, ಬಾಪು ದೇಸಾಯಿ, ವಿ.ಎಸ್.ಸಾಧುನವರಿ ಮೊದಲಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ