*ಬೆಳಗಾವಿ : ಸಂಭ್ರಮಿಸಬೇಕಿದ್ದ ಜಾಗದಲ್ಲಿ ಇಂದು ಶೋಕಾಚರಣೆ!*
ಪ್ರಗತಿವಾಹಿನಿ ಸುದ್ದಿ, *ಬೆಳಗಾವಿ : ಸಂಭ್ರಮಿಸಬೇಕಿದ್ದ ಸ್ಥಳವೀಗ ಶೋಕಾಚರಣೆಯ ಸ್ಥಳವಾಗಿ ಮಾರ್ಪಾಡಾಗಿದೆ.
*ನಿನ್ನೆ ನಿಧನರಾದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಭೆಯನ್ನು ಬೆಳಗಾವಿ ಕ್ಲಬ್ ರಸ್ತೆಯ ಸಿಪಿಇಡಿ ಮೈದಾನದಲ್ಲಿ ಇಂದು (ಶುಕ್ರವಾರ) ಬೆಳಗ್ಗೆ 10.30 ಕ್ಕೆ ಏರ್ಪಡಿಸಲಾಗಿದೆ.
ಇಂದು ನಡೆಯಬೇಕಿದ್ದ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್ ಸಮಾವೇಶ ರದ್ದು ಮಾಡಲಾಗಿದ್ದು, ಅದೇ ಸ್ಥಳದಲ್ಲಿ ಈ ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿದೆ.
ಕಳೆದ ಸುಮಾರು 20 ದಿನಗಳಿಂದ ಸಿಪಿಎಡ್ ಮೈದಾನವನ್ನು ಕಾಂಗ್ರೆಸ್ ಅಧಿವೇಶನದ ಅಂಗವಾಗಿ ಸಾರ್ವಜನಿಕ ಸಮಾವೇಶಕ್ಕಾಗಿ ಸಿದ್ಧ ಮಾಡಲಾಗಿತ್ತು. ಕೋಟ್ಯಂತರ ರೂ. ವೆಚ್ಚ ಮಾಡಿ ಆ ಸ್ಥಳದಲ್ಲಿ ಪೆಂಡಾಲ್ ಸೇರಿದಂತೆ ಅತ್ಯಂತ ವಿಶೇಷವಾಗಿ ಸಜ್ಜುಗೊಳಿಸಲಾಗಿತ್ತು. ಆದರೆ ಅದೇ ಸ್ಥಳದಲ್ಲಿಗೀ ಈಗ ಶೃದ್ಧಾಂಜಲಿ ಸಭೆ ನಡೆಸಬೇಕಾಗಿದೆ. ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ ಈ ಕುರಿತು ಮಾಹಿತಿ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಸೇರಿದಂತೆ ಸಮಾವೇಶಕ್ಕೆ ಆಗಮಿಸಿದ್ದ ಸಚಿವರು, ಶಾಸಕರು, ನಾಯಕರು, ಪದಾಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
*ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಸಂತಾಪ*
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.
“ಮನಮೋಹನ್ ಸಿಂಗ್ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ತುಂಬಾ ನೋವಾಗಿದೆ. ಮನಮೋಹನ್ ಸಿಂಗ್ ಕೇವಲ ರಾಜಕಾರಣಿ ಅಲ್ಲ. ಅವರೊಬ್ಬ ದೇಶ ಹಾಗೂ ಈ ಜಗತ್ತು ಕಂಡ ಮಹಾನ್ ಆರ್ಥಿಕ ತಜ್ಞ.
ಇಂದು ಭಾರತ ಜಾಗತಿಕ ಮಟ್ಟದಲ್ಲಿ ಆರ್ಥಿಕ ಪ್ರಗತಿ ಸಾಧಿಸಿದ್ದರೆ ಅದಕ್ಕೆ ಪ್ರಮುಖ ಕಾರಣ ಮನಮೋಹನ್ ಸಿಂಗ್ ಅವರ ಕ್ರಾಂತಿಕಾರಿ ನೀತಿಗಳು. ದೇಶ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾಗ ಜಾಗತೀಕರಣಕ್ಕೆ ಒಡ್ಡಿಕೊಳ್ಳುವ ಮೂಲಕ ದೇಶವನ್ನು ಕಾಪಾಡಿದ ಆಪದ್ಭಾಂದವ.
ಇದೇ ಕಾರಣಕ್ಕೆ ಸೋನಿಯಾ ಗಾಂಧಿ ಅವರು ತಮ್ಮ ಪಾಲಿಗೆ ಬಂದ ಪ್ರಧಾನಿ ಹುದ್ದೆಯನ್ನು ಮನಮೋಹನ್ ಸಿಂಗ್ ಅವರಿಗೆ ಬಿಟ್ಟುಕೊಟ್ಟರು. ಯುಪಿಎ ಮೊದಲ ಹಾಗೂ ಎರಡನೇ ಸರ್ಕಾರದ ಅವಧಿಯಲ್ಲಿ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ನರೇಗಾ, ಮಾಹಿತಿ ಹಕ್ಕು, ಶೈಕ್ಷಣಿಕ ಹಕ್ಕು, ಆಹಾರ ಭದ್ರತಾ ಕಾಯ್ದೆಯಂತಹ ಕ್ರಾಂತಿಕಾರಿ ಯೋಜನೆಗಳನ್ನು ದೇಶದ ಜನತೆಗೆ ಕೊಟ್ಟಿದ್ದಾರೆ.
ಇಂದು ಸಿಂಗ್ ಅವರು ದೈಹಿಕವಾಗಿ ನಮ್ಮಿಂದ ದೂರವಾಗಿರಬಹುದು. ಆದರೆ ಅವರು ಈ ದೇಶಕ್ಕೆ ನೀಡಿರುವ ಕೊಡುಗೆ ಮೂಲಕ ಸದಾ ಜೀವಂತವಾಗಿರುತ್ತಾರೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ. ಅವರ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಕುಟುಂಬ ಸದಸ್ಯರು, ಸ್ನೇಹಿತರು ಹಾಗೂ ಅವರ ಒಡನಾಡಿಗಳಿಗೆ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ” ಎಂದು ಶಿವಕುಮಾರ್ ಅವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ