Kannada NewsKarnataka NewsLatestPolitics

*ವಿಜಯೇಂದ್ರ ವಿರುದ್ಧ ವಾಚಾಮ ಗೋಚರವಾಗಿ ವಾಗ್ದಾಳಿ ನಡೆಸಿದ ಸಂಸದ ಡಾ.ಸುಧಾಕರ* *ಅವರ ಧೋರಣೆಗೆ ಧಿಕ್ಕಾರ, ಅವರ ಮನೋಸ್ಥಿತಿಗೆ ಧಿಕ್ಕಾರ, ಅವರ ಅಹಂಕಾರಕ್ಕೆ ಧಿಕ್ಕಾರ*

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಭಾರತೀಯ ಜನತಾ ಪಾರ್ಟಿ ಭಿನ್ನಮತ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದ್ದು, ಸಂಸದ ಡಾ.ಸುಧಾಕರ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನನಗೆ ಸಮಾಧಿ ಕಟ್ಟಿದರೆ ನಿಮಗೆ ಏನು ಮಾಡಬೇಕೆಂದು ನನಗೆ ಗೊತ್ತಿದೆ. ಅವರ ಕಾರ್ಯವೈಖರಿ, ಅಹಂಕಾರ, ದರ್ಪ ಸಹಿಸಲು ಸಾಧ್ಯವಿಲ್ಲ. ನನ್ನ ತಾಳ್ಮೆ ಮುಗಿದಿದೆ ಎಂದೂ ಎಚ್ಚರಿಕೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂದು ರಾಜಕೀಯ ಭವಿಷ್ಯವನ್ನು ಪಣಕ್ಕಿಟ್ಟು ಬಂದಿರುವ ನನ್ನ ಸಮಾಧಿ ಮಾಡಲು ವಿಜಯೇಂದ್ರ ಹೊರಟಿದ್ದಾರೆ. ಅವರ ಧೋರಣೆಗೆ ಧಿಕ್ಕಾರ, ಅವರ ಮನೋಸ್ಥಿತಿಗೆ ಧಿಕ್ಕಾರ, ಅವರ ಅಹಂಕಾರಕ್ಕೆ ಧಿಕ್ಕಾರ ಎಂದು ಕಿಡಿಕಾರಿದ್ದಾರೆ.

ಅವರ ಬಳಿ ಸಾವಿರಾರು ಕೋಟಿ ರೂ. ಇರಬಹುದು. ಇವರ ಧೋರಣೆ ಬಹಳಷ್ಟು ಮುಖಂಡರಿಗೆ ನೋವು ತಂದಿದೆ. ಕೇಂದ್ರದ ನಾಯಕರು ಏನು ಸ್ವಾತಂತ್ರ್ಯ ಕೊಟ್ಟಿದ್ದಾರೆ ಗೊತ್ತಿಲ್ಲ. ಆದರೆ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಅವರು ಈಗಾಗಲೆ ಮುಖ್ಯಮಂತ್ರಿಯಾಗಿದ್ದಾರೋ.. ಮುಖ್ಯಮಂತ್ರಿಗಿಂತ ಮೇಲಿದ್ದಾರೋ ಗೊತ್ತಿಲ್ಲ. ಅವರ ಕಾರ್ಯವೈಖರಿ, ಅಹಂಕಾರ, ದರ್ಪ ಸಹಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೋದಿಯವರು 3ನೇ ಬಾರಿ ಪ್ರಧಾನಿಯಾದರೂ ಕಾರ್ಯಕರ್ತರ ಜೊತೆಗೂ ಸೌಜನ್ಯದಿಂದ ನಡೆದುಕೊಳ್ಳುತ್ತಾರೆ. ನಾನೇ ಅವರಿಗೆ ಫೋನ್ ಮಾಡಿದರೂ ರೆಸ್ಪಾನ್ಸ್ ಇಲ್ಲ. ಮೆಸೇಜ್ ಗೆ ಉತ್ತರವಿಲ್ಲ. ಅಪಾಯಿಂಟ್ ಮೆಂಟ್ ಕೊಡ್ತಾ ಇಲ್ಲ. ರಾಷ್ಟ್ರಾಧ್ಯಕ್ಷರೇ ಕೇಳಿದ ತಕ್ಷಣ ಅಪಾಯಿಂಟ್ ಮೆಂಟ್ ಕೊಡ್ತಾರೆ. ಸಮಾಲೋಚನೆಯೇ ಇಲ್ಲ, ಏಕಚಕ್ರಾಧಿಪತ್ಯ. ನಿಮ್ಮ ಸ್ವಂತ ಆಸ್ತಿನಾ ಬಿಜೆಪಿ, ಒಂದು ಸೀಟ್ ಗೆಲ್ಲಿ ನೋಡೋಣ ನಿಮ್ಮ ನಾಯಕತ್ವದಲ್ಲಿ ಎಂದು ಸವಾಲೆಸಂದರು.

ಇಂತಹ ಕ್ಷೇತ್ರದಲ್ಲಿ ನಾನು ಅವರಿಗಿಂತ ಹೆಚ್ಚು ಮತ ಪಡೆದು ಆಯ್ಕೆಯಾಗಿದ್ದೇನೆ. ಎಷ್ಟು ಕಷ್ಟಪಟ್ಟಿದ್ದೇನೆ ಗೊತ್ತಿದೆಯೇ ನಮ್ಮನ್ನು ಸಮಾಧಿ ಕಟ್ಟಲು ಹೊರಟಿದ್ದೀರಾ? ಯಾರು ನನ್ನ ವಿರುದ್ಧ ಕೆಲಸ ಮಾಡಿದ್ದಾರೋ ಅಂತವರನ್ನು ಅಧ್ಯಕ್ಷ ಮಾಡಿದ್ದೀರಿ. ಯಾವ ಸೀನಿಯರ್ ಲೀಡರ್ ನ್ನು ಕೂಡ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಗೋವಿಂದ ಕಾರಜೋಳ ಅವರಿಗೆ ಹೊಡೆಯಲು ಹೋದವರನ್ನು ಅಧ್ಯಕ್ಷರನ್ನು ಮಾಡಿದ್ದಾರೆ. ನನ್ನ ತಾಳ್ಮೆ ಮುಗಿದಿದೆ. ಕೇಂದ್ರದ ನಾಯಕರಿಗೆ ಗಮನಕ್ಕೆ ತಂದರೂ ಈಗ ಅಧ್ಯಕ್ಷರನ್ನು ಘೋಷಿಸಿದ್ದಾರೆ. ರಿಯಲ್ ಎಸ್ಟೇಟ್ ನಲ್ಲಿ ದುಡ್ಡು ತಂದು ಕೊಡಬಹುದು ಇವರೆಲ್ಲ, ರಾಜಕಾರಣ ಮಾಡಲು ಆಗಲ್ಲ ಎಂದು ಕಿಡಿಕಾರಿದರು.

ಕಳೆದ ಚುನಾವಣೆಯಲ್ಲಿ ಅಡ್ಜಸ್ಟ್ ಮೆಂಟ್ ಮಾಡಿಕೊಂಡು ಕೆಲವೆಡೆ ಗದ್ದಿದ್ದೀರಿ. ನಿಮ್ಮಿಂದ ಒಂದು ಸ್ಥಾನವನ್ನೂ ಗೆದ್ದಿಲ್ಲ. ಇನ್ನೂ ಕೆಲವು ವಿಷಯಗಳಿವೆ. ಮುಂದೆ ಹೇಳುತ್ತೇನೆ. ಕೇಂದ್ರ ನಾಯಕರನ್ನು ಭೇಟಿ ಮಾಡಿ ಎಲ್ಲವನ್ನೂ ಬಿಚ್ಚಿಡುತ್ತೇನೆ. ಪಕ್ಷವನ್ನು ಮುಗಿಸಲು ಹೊರಟಿದ್ದಾರೆ. ಇಂತವರನ್ನು ಮತ್ತೆ ನೆಚ್ಚಿಕೊಂಡರೆ ಸಾಧ್ಯವಿಲ್ಲ ಎಂದರು.

ಯಡಿಯೂರಪ್ಪ ನವರಿಗೆ ಹೋಲಿಸಲು ಸಾಧ್ಯವಿಲ್ಲ. ಅವರ ವ್ಯಕ್ತಿತ್ವವೇ ಬೇರೆ. ಅವರ ಯಾವು ಗುಣವೂ ನಿಮಗೆ ಬಂದಿಲ್ಲ. ನಿಮ್ಮದು ದ್ವೇಷದ ರಾಜಕಾರಣ. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡುವಾಗ ಬಸವಣ್ಣನವರ ಪಾದದ ಮೇಲೆ ಪ್ರಮಾಣ ಮಾಡಿದ್ದಿರಿ, ಹಾಗೇ ನಡೆದುಕೊಂಡಿದ್ದೀರಾ? ನಾನು ಏನು ತೀರ್ಮಾನ ತೆಗೆದುಕೊಳ್ಳಬೇಕೋ ತೆಗೆದುಕೊಳ್ಳುತ್ತೇನೆ. ಏನು ಮಾಡಬೇಕೆಂದು ಗೊತ್ತಿದೆ. ಅನೇಕ ಜಿಲ್ಲೆಗಳಲ್ಲಿ ಇದೇ ರೀತಿ ಆಗಿದೆ. ಬಹಳಷ್ಟು ಜನರಿಗೆ ಹೇಳಲು ಧೈರ್ಯ ಬರುತ್ತಿಲ್ಲ ಎಂದು ಸುಧಾಕರ ಹೇಳಿದರು.

ಸಿದ್ದರಾಮಯ್ಯ ಹೇಳಿದ್ದರು, ನಿಮ್ಮನ್ನು ಉಪಯೋಗಿಸಿಕೊಂಡು ಕೈ ಬಿಡುತ್ತಾರೆ ಎಂದು ಬಹಳಷ್ಟು ಬಾರಿ ಹೇಳಿದ್ದರು. ಆದರೆ ನಾನು ಆಗ ಕೇಳಲಿಲ್ಲ. ಅವರ ಧೋರಣೆಗೆ ಧಿಕ್ಕಾರ, ಅವರ ಮನೋಸ್ಥಿತಿಗೆ ಧಿಕ್ಕಾರ, ಅವರ ಅಹಂಕಾರಕ್ಕೆ ಧಿಕ್ಕಾರ. ಪಕ್ಷವನ್ನು ಅವನತಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಅವರ ಧೋರಣೆಗೆ ಧಿಕ್ಕಾರ, ಅವರ ಮನೋಸ್ಥಿತಿಗೆ ಧಿಕ್ಕಾರ, ಅವರ ಅಹಂಕಾರಕ್ಕೆ ಧಿಕ್ಕಾರ. ಅವರ ಧೋರಣೆ ಬದಲಾಯಿಸಿ ಇಲ್ಲವೇ ಅವರನ್ನೇ ಬದಲಾಯಿಸಿ ಎಂದು ಮಾಧ್ಯಮಗಳ ಮೂಲಕ ಹೇಳಬೇಕಾಗಿ ಬಂದಿರುವುದಕ್ಕೆ ವಿಷಾಧವಿದೆ ಎಂದರು.

ರಾಷ್ಟ್ರೀಯ ನಾಯಕರು ಸರಿಪಡಿಸುತ್ತಾರೆ ಎಂದುಕೊಂಡು ಎಷ್ಟೇ ನೋವಾದರೂ, ಅಪಮಾನವಾದರೂ ಸಹಿಸಿಕೊಂಡಿದ್ದೆ. ನನ್ನ ಶಿಸ್ತು, ಒಳ್ಳೆಯ ತನವನ್ನು ದೌರ್ಬಲ್ಯ ಎಂದು ತಿಳಿದುಕೊಂಡಿದ್ದಾರೆ. ಅವರಿಗೆ ಅಡ್ಡ ದಾರಿಯಲ್ಲಿ ರಾಜ್ಯಾಧ್ಯಕ್ಷರಾಗಬೇಕಿದೆ. ಹಾಗಾಗಿ ತಮಗೆ ಓಟು ಹಾಕುವವರನ್ನು ಮಾಡಬೇಕೆಂದು ಆಂತರಿಕ ಪ್ರಜಾಪ್ರಭುತ್ವವನ್ನೇ ಕಗ್ಗೊಲೆ ಮಾಡಿದ್ದಾರೆ. ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ನಾನು ರಾಷ್ಟ್ರೀಯ ನಾಯಕರ ಜೊತೆ ಮಾತನಾಡಿದ ನಂತರ ತೀರ್ಮಾನ ಮಾಡುತ್ತೇನೆ. ಏನು ಬೇಕಾದರೂ ಆಗಬಹುದು ಎಂದು ಸುಧಾಕರ ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button