ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬರಗಾಲ, ಅನಿಯಮಿತ ವಿದ್ಯುತ್ ಲೋಡ್ ಶೆಡ್ಡಿಂಗ್‌ನಿಂದ ಕಂಗಾಲದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ರಾಜ್ಯ ಸರ್ಕಾರ ಇನ್ನುಮುಂದೆ ರೈತರ ಪಂಪಸೆಟ್ ಗಳಿಗೆ ವಿದ್ಯುತ್ ಪಡೆಯಬೇಕಾದರೇ ಸ್ವಂತ ಖರ್ಚಿನಲ್ಲಿ ಟ್ರಾನ್ಸ್ ಫಾರ್ಮ, ಕಂಬ ಮತ್ತು ತಂತಿ ಸೇರಿದಂತೆ ವಿದ್ಯುತ್ ಗೆ ಸಂಬಂಧಪಟ್ಟ ವಸ್ತುಗಳನ್ನು ರೈತರೇ ಖರೀದಿಸಬೇಕೆಂದು ಆದೇಶ ಹೊರಡಿಸಿರುವುದು ಖಂಡನೀಯ ಎಂದು ರಾಜ್ಯಸಭಾ ಸದಸ್ಯ, ರೈತ ಮೋರ್ಚಾ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇಂದು ಬೆಳಗಾವಿ ಮಹಾನಗರದ ಸರ್ಕಿಟ್ ಹೌಸ್ (ಐಬಿ)ದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ರೈತರಿಗೆ ನೂತನ ವಿದ್ಯುತ್ ಸಂಪರ್ಕವನ್ನು ಸ್ವಂತ ಖರ್ಚಿನಿಂದ ಪಡೆದುಕೊಳ್ಳಬೇಕೆಂಬ ಆದೇಶವನ್ನು ಕೈ ಬಿಡುವಂತೆ ಆಗ್ರಹಿಸಿದರು.
ಈ ಹಿಂದೆ ಪ್ರತಿ ನೀರಾವರಿ ಪಂಪಸೆಟ್ ಗಳಿಗೆ ಕೇವಲ 24 ಸಾವಿರ ರೂಪಾಯಿ ಶುಲ್ಕ ನಿಗದಿಯಾಗಿತ್ತು, ಸರ್ಕಾರದ ಈ ಆದೇಶದಿಂದ ಕನಿಷ್ಠ 2 ಲಕ್ಷ ರೂಪಾಯಿ ನೀಡಿ ವಿದ್ಯುತ್ ಸಂಪರ್ಕ ಪಡೆಯಬೇಕಾದ ಅನಿವಾರ್ಯತೆಗೆ ರೈತರನ್ನು ನೂಕಲಾಗಿದೆ. ಮಳೆಯ ಅಭಾವದಿಂದ ರಾಜ್ಯದಲ್ಲಿ ಸಂಪೂರ್ಣ ಬರಗಾಲ ಆವರಿಸಿದ್ದು, ಮುಂಗಾರು ಬೆಳೆ ಸಂಪೂರ್ಣ ಹಾಳಾಗಿ ಹೊಗಿದೆ. ಪ್ರಸ್ತುತ ಹಿಂಗಾರಿನಲ್ಲಿ ಕೂಡ ಮಳೆಯ ಅಭಾವದಿಂದಾಗಿ ರೈತನ ಬೆಳೆಗಳು ಸಂಪೂರ್ಣ ನಾಶವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ವರದಿಯ ಪ್ರಕಾರ ರಾಜ್ಯದಲ್ಲಿ 223 ತಾಲೂಕುಗಳು ಸಂಪೂರ್ಣ ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ. ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸುಮಾರು 200 ಕ್ಕಿಂತಲೂ ಹೆಚ್ಚು ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದು, ಇದು ದುರ್ದೈವದ ಸಂಗತಿ. ರಾಜ್ಯದಲ್ಲಿ ಅಳಿದುಳಿದ ಬೆಳೆಗಳನ್ನು ಉಳಿಸಿಕೊಳ್ಳಲಿಕ್ಕೆ ರೈತರು ತೆರೆದ ಬಾವಿ, ಕೊಳವೆ ಭಾವಿಗಳ ಮೋರೆ ಹೋಗಿದ್ದಾರೆ. ಆದರೆ ಹಗಲು ಹೊತ್ತಿನಲ್ಲಿ ವಿದ್ಯುತ್ ಪೂರೈಕೆಯಾಗಲಾರದೇ ಅನಿಯಮಿತ ಲೋಡ್ ಶೆಡ್ಡಿಂಗ್ ಹೊಡೆತಕ್ಕೆ ರೈತರು ಬಸವಳಿದು ಹೋಗುವಂತಾಗಿದೆ ಎಂದರು.
ಈ ಹಿಂದಿನ ರೈತ ಪರವಾದ ಯೋಜನೆಗಳಾದ ಕಿಸಾನ್ ಸಮ್ಮಾನ ನಿಧಿ, ರೈತ ವಿದ್ಯಾನಿಧಿ, ಭೂ ಚೇತನ, ಭೂ ಸಿರಿ, ರೈತ ಶಕ್ತಿ, ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಸೇರಿದಂತೆ ಅನೇಕ ಯೋಜನೆಗಳನ್ನು ಅನುದಾನದ ಕೊರತೆ ಎಂಬ ನೆಪವೊಡ್ಡಿ ರದ್ದು ಮಾಡಲಾಗಿದೆ. ವಿದ್ಯುತ್ ಅಭಾವ, ರೈತರ ಆತ್ಮಹತ್ಯೆ ಹಾಗೂ ಬರ ಪೀಡಿತ ಪ್ರದೇಶದ ರೈತರ ಸಹಾಯಕ್ಕೆ ಬರಬೇಕಾದ ಸರ್ಕಾರ ಮತ್ತು ಉಸ್ತುವರಿ ಮಂತ್ರಿಗಳು ಯಾವುದೇ ಜಿಲ್ಲೆಗಳಿಗೆ ಭೇಟಿ ನೀಡಿಲ್ಲ. ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಿಲ್ಲ. ರೈತನ ಬದುಕು ಅತ್ಯಂತ ಅಸಹನಿಯವಾಗಿದೆ ಎಂದರು.
ರೈತರ ಕೃಷಿ ಪಂಪಸೆಟ್‌ಗಳಿಗೆ ಸ್ವಂತ ಖರ್ಚಿನಲ್ಲಿಯೇ ಹೊಸ ಸಂಪರ್ಕ ಪಡೆಯುವ ಆದೇಶವನ್ನು ಸರ್ಕಾರ ರದ್ದುಗೊಳಿಸಿ, ಈ ಹಿಂದಿನಂತೆಯೇ ವಿದ್ಯುತ್ ಸಂಪರ್ಕ ನೀಡಬೇಕಾಗಿ ಸರ್ಕಾರವನ್ನು ಕರ್ನಾಟಕ ಬಿಜೆಪಿ ರೈತ ಮೋರ್ಚಾ ಪರವಾಗಿ ಒತ್ತಾಯಿಸುತ್ತೇನೆ. ಒಂದು ವೇಳೆ ಈ ಆದೇಶವನ್ನು ಹಿಂಪಡೆಯದಿದ್ದರೇ ರಾಜ್ಯದ ಸುಮಾರು 35 ಲಕ್ಷ ಪಂಪ್‌ಸೆಟ್ ಗಳ ರೈತ ಬಳಕೆದಾರರೊಂದಿಗೆ ಬಿಜೆಪಿ ರೈತ ಮೋರ್ಚಾ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.
ಮಾಜಿ ಶಾಸಕರಾದ ಅನಿಲ ಬೆನಕೆ, ಸಂಜಯ ಪಾಟೀಲ ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ