ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು.
ಮೂತ್ರಕೋಶ ಸಮಸ್ಯೆ ಮತ್ತು ವಯೋಸಹಜ ಕಾಯಿಲೆಯಿಂದ ಅವರು ಬಳಲುತ್ತಿದ್ದರು. 3 ದಿನಗಳ ಹಿಂದೆ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಗಿನಜಾವ 1.20ಕ್ಕೆ ಅವರು ಕೊನೆಯುಸಿರೆಳದರು.
ಅವರಿಗೆ ಪತ್ನಿ ಹಾಗೂ ಮೂವರು ಪುತ್ರಿಯರಿದ್ದಾರೆ. 6 ಬಾರಿ ಸಂಸದರಾಗಿ, 4 ಬಾರಿ ಶಾಸಕರಾಗಿ ಕೆಲಸ ಮಾಡಿದ್ದ ಅವರು, ಒಟ್ಟೂ 50 ವರ್ಷ ರಾಜಕೀಯದಲ್ಲಿದ್ದರು.
1974ರಲ್ಲಿ ರಾಜಕೀಯ ಪ್ರವೇಶಿಸಿದ್ದ ಅವರು ಮೊದಲೆರಡು ಚುನಾವಣೆಯಲ್ಲಿ ಸೋಲನುಭವಿಸಿ ನಂತರ 1980ರಲ್ಲಿ ಚಾಮರಾಜ ನಗರ ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಲೋಕಸಭೆಗೆ ಪ್ರವೇಶಿಸಿದ್ದರು. ನಂತರ 4 ಬಾರಿ ವಿಧಾನಸಭೆಗೂ ಪ್ರವೇಶಿಸಿದ್ದರು. ರಾಜ್ಯದಲ್ಲಿ 2 ಬಾರಿ ಸಚಿವರಾಗಿ ಕೂಡ ಕೆಲಸ ಮಾಡಿದ್ದರು.
2017ರಲ್ಲಿ ಸಿದ್ದರಾಮಯ್ಯ ಸಂಪುಟದಿಂದ ಕೈಬಿಟ್ಟಿದ್ದರಿಂದ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಬಿಜೆಪಿ ಸೇರಿದ್ದರು. ಉಪಚುನಾವಣೆಯಲ್ಲಿ ಸೋಲುಂಡಿದ್ದರು. 2019ರ ಚುನಾವಣೆಯಲ್ಲಿ ಬಿಜೆಪಿಯಿಂದ ಚಾಮರಾಜ ನಗರದಿಂದ ಲೋಕಸಭೆಗೆ ಸ್ಪರ್ಧಿಸಿ ಜಯಸಾಧಿಸಿದ್ದರು.
ಇತ್ತೀಚೆಗೆ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದರು.
ಅವರ ಮೃತದೇಹವನ್ನು ಮೈಸೂರಿಗೆ ಒಯ್ಯಲಾಗುತ್ತಿದ್ದು, ಜಯಲಕ್ಷ್ಮೀ ಪುರಂ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗುವುದು. ಸಂಜೆ ಸಕಲ ಸರಕಾರಿ ಮರ್ಯಾದೆಗಳೊಂದಿಗೆ ಅಂತಿಮ ಸಂಸ್ಕಾರ ನಡೆಯಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ