Belagavi NewsBelgaum NewsElection NewsKannada NewsKarnataka NewsPolitics

ಏ.15ರಂದು ಮೃಣಾಲ ಹೆಬ್ಬಾಳಕರ್ ನಾಮಪತ್ರ ಸಲ್ಲಿಕೆ

ಗಣ್ಯರು, ಕಾರ್ಯಕರ್ತರ ಉಪಸ್ಥಿತಿಯಲ್ಲಿ ಹಿಂಡಲಗಾ ಗಣಪತಿ ದೇವಸ್ಥಾನದಿಂದ ಬೃಹತ್ ರ್‍ಯಾಲಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಏಪ್ರಿಲ್ 15ರಂದು ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ. 

ಅಂದು ಬೆಳಗ್ಗೆ 6 ಗಂಟೆಗೆ ಸುಳೇಬಾವಿ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಾಮಪತ್ರಕ್ಕೆ ಪೂಜೆ ಸಲ್ಲಿಸುವ ಮೃಣಾಲ ಹೆಬ್ಬಾಳಕರ್, ನಂತರ 11 ಗಂಟೆಗೆ ಹಿಂಡಲಗಾ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ರ್‍ಯಾಲಿ ಆರಂಭಿಸಲಿದ್ದಾರೆ. ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸುವರು.

ಲೋಕೋಪಯೋಗಿ ಸಚಿವರೂ, ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸತೀಶ್ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೇರಿದಂತೆ ಜಿಲ್ಲೆಯ ಎಲ್ಲ ಕಾಂಗ್ರೆಸ್ ಶಾಸಕರು, ಮುಖಂಡರು, ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಜೊತೆಗೆ ರಾಜ್ಯದ ಕೆಲವು ನಾಯಕರೂ ಆಗಮಿಸುವ ನಿರೀಕ್ಷೆ ಇದೆ.

ಮೃಣಾಲ ಹೆಬ್ಬಾಳಕರ್ ಪರವಾಗಿ ಕ್ಷೇತ್ರದಲ್ಲಿ ಈಗಾಗಲೆ ಅಬ್ಬರದ ಪ್ರಚಾರ ನಡೆದಿದ್ದು, ಎಲ್ಲೆಡೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಕ್ಷೇತ್ರದ ಎಲ್ಲ ತಾಲೂಕು ಮತ್ತು ಹೋಬಳಿಗಳಲ್ಲಿ ಕಾರ್ಯಕರ್ತರ ಸಭೆ, ಸಾರ್ವಜನಿಕರ ಭೇಟಿ ನಡೆಯುತ್ತಿದೆ. ಮನೆ ಮಗನಾಗಿರುವ ನನಗೆ ಮತ ನೀಡುವ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆಶಿರ್ವಾದ ಮಾಡಿ. ಜಿಲ್ಲೆಗೆ ಹಲವಾರು ಯೋಜನೆಗಳನ್ನು ತರುವ, ಮುಖ್ಯವಾಗಿ ಯುವಕರಿಗೆ ಉದ್ಯೋಗ ಒದಗಿಸುವ ದಿಸೆಯಲ್ಲಿ ಹಲವಾರು ಕನಸುಗಳನ್ನು ಕಟ್ಟಿಕೊಂಡಿದ್ದೇನೆ. ಎಂಜಿನಿಯರಿಂಗ ಪದವೀಧರನಾಗಿರುವ ನನ್ನನ್ನು ಬೆಂಬಲಿಸುವ ಮೂಲಕ  ನಿಮ್ಮ ಸೇವೆಗೆ ಅವಕಾಶ ಕೊಡಿ ಎಂದು ಮೃಣಾಲ ಹೆಬ್ಬಾಳಕರ್ ಕೋರುತ್ತಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಜಿಲ್ಲೆಯ ಎಲ್ಲ ಶಾಸಕರು, ಕಾಂಗ್ರೆಸ್ ಮುಖಂಡರು ಪ್ರಚಾರ ಕಾರ್ಯಕ್ಕೆ ಸಾಥ್ ನೀಡುತ್ತಿದ್ದಾರೆ. ಹೋದಲ್ಲೆಲ್ಲ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ.

ಸೋಮವಾರ ನಾಮಪತ್ರ ಸಲ್ಲಿಕೆ ನಂತರ ಎರಡನೇ ಸುತ್ತಿನ ಪ್ರಚಾರ ಕಾರ್ಯವನ್ನು ಆರಂಭಿಸಲಾಗುವುದು. ಪಕ್ಷದ ಸ್ಟಾರ್ ಪ್ರಚಾರಕರು ಸೇರಿದಂತೆ ವಿವಿಧ ಮುಖಂಡರು ಪ್ರಚಾರಕ್ಕೆ ಆಗಮಿಸಲಿದ್ದಾರೆ. ಈ ಬಾರಿ ಬೆಳಗಾವಿ ಮತ್ತು ಚಿಕ್ಕೋಡಿ ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button