Belagavi NewsBelgaum NewsElection NewsKannada NewsKarnataka NewsPolitics

ಬೆಳಗಾವಿಯಲ್ಲಿ ಕನಿಷ್ಟ ಎರಡೂವರೆ ಲಕ್ಷ ಮತಗಳ ಅಂತರದಿಂದ ಮೃಣಾಲ ಹೆಬ್ಬಾಳಕರ್ ಗೆಲುವು : ಲಕ್ಷ್ಮೀ ಹೆಬ್ಬಾಳಕರ್ ವಿಶ್ವಾಸ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ದಿನದಿಂದ ದಿನಕ್ಕೆ ಕಾಂಗ್ರೆಸ್ ಪರ ಜನರ ಒಲವು ಹೆಚ್ಚಾಗುತ್ತಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಮೃಣಾಲ ಹೆಬ್ಬಾಳಕರ್ ಕನಿಷ್ಟ ಎರಡೂವರೆ ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ನಗರದ ವಿವಿಧೆಡೆ ಬುಧವಾರ ಸಂಜೆ ಪ್ರಚಾರ ನಡೆಸಿದ ಸಚಿವರು, ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲ 8 ವಿಧಾನ ಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆ ಮುನ್ನಡೆ ಸಿಗಲಿದೆ. ಯುವಕರಿಂದ ಹಿಡಿದು, ಹಿರಿಯರು, ಮಹಿಳೆಯರು ಎಲ್ಲರೂ ಈ ಬಾರಿ ಪಕ್ಷಾತೀತವಾಗಿ ಮೃಣಾಲ ಹೆಬ್ಬಾಳಕರ್ ಬೆಂಬಲಿಸಲು ಮುಂದಾಗಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಪ್ರತಿ ಮನೆಯನ್ನೂ ತಲುಪಿದೆ. ನುಡಿದಂತೆ ನಡೆದಿದ್ದಕ್ಕಾಗಿ ಪಕ್ಷದ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿದೆ. ಜೊತೆಗೆ ನಾನು ಗ್ರಾಮೀಣ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ನೋಡಿ ಜನರು ಮೃಣಾಲ್ ಪರ ಒಲವು ತೋರಿಸುತ್ತಿದ್ದಾರೆ. ಯುವಕನಾಗಿರುವ ಮೃಣಾಲ್ ಕ್ಷೇತ್ರಕ್ಕಾಗಿ ಖಂಡಿತ ಕೆಲಸ ಮಾಡಲಿದ್ದಾನೆ ಎನ್ನುವ ಭಾವನೆ ಜನರಲ್ಲಿ ಮೂಡಿದೆ ಎಂದು ತಿಳಿಸಿದರು.
ಹಿಂದಿನಿಂದಲೂ ಬೆಳಗಾವಿಗೆ ಬರಬೇಕಿದ್ದ ಅಭಿವೃದ್ಧಿ ಯೋಜನೆಗಳು ಹುಬ್ಬಳ್ಳಿ ಪಾಲಾಗುತ್ತಿರುವ ಕುರಿತು ಬೆಳಗಾವಿ ಜನರು ಹೋರಾಟ ನಡೆಸುತ್ತಲೇ ಬಂದಿದ್ದಾರೆ. ವಿಪರ್ಯಾಸವೆಂದರೆ ಆ ರೀತಿ ಇಲ್ಲಿಂದ ಎಲ್ಲವನ್ನೂ ಕಿತ್ತುಕೊಂಡು ಹೋಗಲು ಕಾರಣರಾದವರೇ ಇಂದು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಅಂತವರನ್ನು ಬೆಂಬಲಿಸಿದರೆ ಬೆಳಗಾವಿಗೆ ಎಂತಹ ತೊಂದರೆ ಬರಲಿದೆ ಎನ್ನುವುದನ್ನು ನಾವೆಲ್ಲ ಯೋಚಿಸಬೇಕಾಗಿದೆ. ಹಾಗಾಗಿ ಸ್ಥಳೀಯ ಅಭ್ಯರ್ಥಿಯಾಗಿರುವ ಮೃಣಾಲ ಹೆಬ್ಬಾಳಕರ್ ಅವರನ್ನು ಬೆಂಬಲಿಸುವ ಮೂಲಕ ಬೆಳಗಾವಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯಬೇಕಾಗಿದೆ ಎಂದು ಹೆಬ್ಬಾಳಕರ್ ಮನವಿ ಮಾಡಿದರು.


ಮೇ 7ರಂದು ನಡೆಯಲಿರುವ ಚುನಾವಣೆಯಲ್ಲಿ ಎಲ್ಲರೂ ತಪ್ಪದೆ ಮತದಾನ ಮಾಡಬೇಕು. ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಅವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಿ, ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಕೈಜೋಡಿಸಿ ಎಂದು ಸಚಿವರು ಮನವಿ ಮಾಡಿದರು.
ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಆಜಮ್ ನಗರದಲ್ಲಿ‌ ನಡೆದ ಸಭೆಯಲ್ಲಿ ಶಾಸಕ ಆಸೀಫ್ ಸೇಠ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ರಾಜ್ಯ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಮೊಹಮ್ಮದ್ ನಲ್ಪಾಡ್, ಸ್ಥಳೀಯ ನಿವಾಸಿಗಳು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
​ ನಂತರ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಭಾಗ್ಯನಗರದಲ್ಲಿ ​ನಡೆದ ಪ್ರಚಾರ ಸಭೆಯಲ್ಲಿ ​ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಜೆ.ಪ್ರದೀಪ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪರಶುರಾಮ ಡಾಗೆ, ಚಂದ್ರಹಾಸ ಅ​ಣವೇಕರ್, ಕಿರಣ್ ಪಾ​ಟೀಲ್, ವಿಠಲ್ ಪಾವಸ್ಕರ್,‌ ಶೀತಲ್ ರಾಮ್ ಶೆಟ್ಟಿ ಸೇರಿದಂತೆ ‌ಹಲವರು ಉಪಸ್ಥಿತರಿದ್ದರು.​
​ ಇದಾದ ನಂತರ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಅನಗೊಳದ ಕುರುಬರ ಗಲ್ಲಿಯಲ್ಲಿ‌​ ಪ್ರಚಾರ ಸಭೆ ನಡೆಯಿತು. ಈ ವೇಳೆ​ ಎಂ.ಜೆ.ಪ್ರದೀಪ್ ಅಜೀಜ್‌ ಮುಮೇನ್, ಶಬ್ಬಿರ್ ಶೇಖ್, ಸಾಧಿಕ್ ತಿಗಡಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button