*BREAKING: ಮುಡಾ ಕೇಸ್: ಸಿಎಂ ಸಿದ್ದರಾಮಯ್ಯ, ಪತ್ನಿಗೆ ಬಿಗ್ ರಿಲೀಫ್*

ಪ್ರಗತಿವಾಹಿನಿ ಸುದ್ದಿ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ-ಮುಡಾ ನಿವೇಷನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಪತ್ನಿ ಪಾರ್ವತಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಸಲ್ಲಿಸಿದ್ದ ಬಿ ರಿಪೋರ್ಟ್ ನ್ನು ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಪುರಸ್ಕರಿಸಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಭಾಮೈದ ಮಲ್ಲಿಕಾರ್ಜುನ ಸ್ವಾಮಿ, ಜಮೀನು ಮಾಲೀಕ ದೇವರಾಜ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಪತ್ನಿ ವಿರುದ್ಧ ಯಾವುದೇ ತನಿಖೆ ನಡೆಸುವಂತಿಲ್ಲ.
ಮುಡಾ ಕೇಸ್ ಸಂಬಂಧ ಉಳಿದವರ ವಿರುದ್ಧ ತನಿಖೆಗೆ ಕೋರ್ಟ್ ಆದೇಶ ನೀಡಿದೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿರುವ ಲೋಕಾಯುಕ್ತ ಪೊಲೀಸರು ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಮಲ್ಲಿಕಾರ್ಜುನ ಸ್ವಾಮಿ, ಜಮೀನು ಮಾಲೀಕ ದೇವರಾಜು ವಿರುದ್ಧ ಯಾವುದೇ ಸೂಕ್ತ ಸಾಕ್ಷಾಧಾರಗಳು ಇಲ್ಲ ಎಂದು ಜನಪ್ರತಿನಿಧಿ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದರು. ಲೋಕಾಯುಕ್ತ ಸಲ್ಲಿಸಿದ್ದ ಬಿ ರಿಪೋರ್ಟ್ ಪ್ರಶ್ನಿಸಿ ದೂರುದಾರ ಸ್ನೇಹಮಯಿ ಕೃಷ್ಣ ತಕರಾರು ಅರ್ಜಿ ಸಲ್ಲಿಸಿದ್ದರು. ಇದೀಗ ಅರ್ಜಿ ವಿಚಾರಣೆ, ಸುದೀರ್ಘ ವಾದ-ಪ್ರತಿವಾದಗಳನ್ನು ಆಲಿಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್, ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಸೇರಿ ನಾಲ್ವರ ವಿರುದ್ಧ ಯಾವುದೇ ಸಾಕ್ಷಾಧಾರಗಳಿಲ್ಲದ ಹಿನ್ನೆಲೆಯಲ್ಲಿ ಲೋಕಾಯುಕ್ತ ಬಿ ರಿಪೋರ್ಟ್ ಸಲ್ಲಿಸಿದ್ದು, ಬಿ ರಿಪೋರ್ಟ್ ಪುರಸ್ಕರಿಸಲಾಗಿದೆ ಎಂದು ತೀರ್ಪು ನೀಡಿದೆ. ಮುಡಾ ಹಗರಣದಲ್ಲಿ ಉಳಿದವರ ವಿರುದ್ಧ ಇರುವ ಕೇಸ್ ಸಂಬಂಧ ವಿಚಾರಣೆ ನಡೆಸಬಹುದು ಎಂದು ತಿಳಿಸಿದೆ.
ಇನ್ನು ಮುಡಾ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ ಕೂಡ ತನಿಖೆಯಲ್ಲಿ ಎಂಟ್ರಿಯಾಗಿತ್ತು. ಸಿಎಂ ಸಿದ್ದರಮಾಯ್ಯ ವಿರುದ್ಧದ ತನಿಖೆ ವಿಚಾರದಲ್ಲಿ ಇದೀಗ ಇಡಿಗೂ ಹಿನ್ನಡೆಯಾದಂತಾಗಿದೆ.




