ಜಾರಕಿಹೊಳಿ ಕುಟುಂಬಕ್ಕೆ ಮಲ್ಟಿಪಲ್ ಶಾಕ್!
ಎಂ.ಕೆ.ಹೆಗಡೆ, ಬೆಳಗಾವಿ-
ಜೆಡಿಎಸ್ -ಕಾಂಗ್ರೆಸ್ ಸಮ್ಮಿಶ್ರ ಸರಕಾರ ಪತನವಾಗಿ ಬಿಜೆಪಿ ಸರಕಾರ ಅಸ್ಥಿತ್ವಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗೋಕಾಕ ಜಾರಕಿಹೊಳಿ ಕುಟುಂಬಕ್ಕೆ ಈಗ ಒಂದಲ್ಲ, ಎರಡಲ್ಲ, ಮಲ್ಟಿಪಲ್ ಶಾಕ್ ಉಂಟಾಗಿದೆ.
ಜಾರಕಿಹೊಳಿ ಕುಟುಂಬದ ಪ್ರಭಾವ ತಗ್ಗಿಸಲು ಮಾಸ್ಟರ್ ಪ್ಲ್ಯಾನ್ ಹೆಣೆಯಲಾಗಿದೆಯೇ ಎನ್ನುವ ಅನುಮಾನ ಬರುವಂತಿದೆ ಯಡಿಯೂರಪ್ಪ ನಡೆ.
ಇದನ್ನೂ ಓದಿ – ಇನ್ನು ಕೆಲವೇ ಕ್ಷಣದಲ್ಲಿ ನೂತನ ಸಚಿವರ ಪ್ರಮಾಣ ವಚನ
ಇದು ಕೇವಲ ಬಾಲಚಂದ್ರ ಜಾರಕಿಹೊಳಿ ಕೈಬಿಟ್ಟಿದ್ದಕ್ಕಷ್ಟೆ ಸೀಮಿತವಾಗಿಲ್ಲ. ಅದಕ್ಕಿಂತ ಪ್ರಮುಖವಾದ ಶಾಕ್ ಲಕ್ಷ್ಮಣ ಸವದಿಗೆ ಸ್ಥಾನ ನೀಡಿದ್ದು.
ಯಡಿಯೂರಪ್ಪ ಸಚಿವಸಂಪುಟದ ಪಟ್ಟಿ ಹೊರಬೀಳುತ್ತಿದ್ದಂತೆ ಒಂದರ್ಥದಲ್ಲಿ ಇಡೀ ರಾಜ್ಯವೇ ಶಾಕ್ ಆಗುವಂತಾಗಿದ್ದು ಬಾಲಚಂದ್ರ ಜಾರಕಿಹೊಳಿ ಕೈ ಬಿಟ್ಟಿದ್ದು. ಜಾರಕಿಹೊಳಿ ಕುಟುಂಬದ ಇಬ್ಬರು ಯಡಿಯೂರಪ್ಪ ಸಂಪುಟದಲ್ಲಿ ಸ್ಥಾನ ಪಡೆಯುತ್ತಾರೆ ಎನ್ನುವ ನಿರೀಕ್ಷೆ ಇತ್ತು. ರಮೇಶ ಜಾರಕಿಹೊಳಿ ಉಪಮುಖ್ಯಮಂತ್ರಿಯಾಗುತ್ತಾರೆ, ಬಾಲಚಂದ್ರ ಜಾರಕಿಹೊಳಿ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಬಹುದು ಎನ್ನುವ ಸುದ್ದಿ ಬಲವಾಗಿತ್ತು.
ಏನೇನು ಶಾಕ್?
-
ಈಗಾಗಲೆ ಅನರ್ಹತೆಯ ಶಿಕ್ಷೆಗೆ ಒಳಗಾಗಿ ಶಾಕ್ ಗೆ ಒಳಗಾಗಿದ್ದರು ರಮೇಶ್ ಜಾರಕಿಹೊಳಿ
-
ಬಾಲಚಂದ್ರ ಜಾರಕಿಹೊಳಿಗೆ ಸಚಿವಸ್ಥಾನ ಕೈತಪ್ಪಿದ್ದು ಜಾರಕಿಹೊಳಿ ಕುಟುಂಬಕ್ಕೆ ಮತ್ತೊಂದು ಶಾಕ್
-
15 ವರ್ಷದ ನಂತರ ಮೊದಲ ಬಾರಿಗೆ ಕುಟುಂಬಕ್ಕೆ ಮಂತ್ರಿಸ್ಥಾನ ಕೈತಪ್ಪಿದ್ದು ಇನ್ನೊಂದು ಶಾಕ್
-
ಅತೃಪ್ತ ಶಾಸಕರ ನಾಯಕ ರಮೇಶ ಜಾರಕಿಹೊಳಿ ಕಟ್ಟಾ ವಿರೋಧಿ ಲಕ್ಷ್ಮಣ ಸವದಿಗೆ ಸಚಿವಸ್ಥಾನ ನೀಡುತ್ತಿರುವುದು ಬಿಗ್ ಶಾಕ್
ಆದರೆ ರಮೇಶ್ ಜಾರಕಿಹೊಳಿ ಅನರ್ಹತೆಯ ಶಿಕ್ಷೆಗೆ ಒಳಗಾಗಿದ್ದರಿಂದ ಸಧ್ಯಕ್ಕೆ ಬಾಲಚಂದ್ರ ಜಾರಕಿಹೊಳಿಗೆ ಸ್ಥಾನ ನೀಡುವುದು ಖಚಿತ ಎನ್ನಲಾಗಿತ್ತು. ಆದರೆ ಇದೀಗ ಬಾಲಚಂದ್ರ ಅವರನ್ನೂ ಕೈಬಿಡಲಾಗಿದೆ. ಇದರ ಹಿಂದೆ ಏನೇನು ಲೆಕ್ಕಾಚರವಿದೆ? ಅವರನ್ನು ಹೇಗೆ ಸಮಾಧಾನಪಡಿಸಲಾಗುತ್ತದೆ ಎನ್ನುವುದೆಲ್ಲ ಇನ್ನು ಮುಂದೆ ಗೊತ್ತಾಗಬೇಕಿದೆ.
ಸಂಬಂಧಿಸಿದ ಸುದ್ದಿ –ಯಡಿಯೂರಪ್ಪ ಕರೆಯ ಮೇರೆಗೆ ಬೆಂಗಳೂರಿಗೆ ತೆರಳಿದ ಬಾಲಚಂದ್ರ ಜಾರಕಿಹೊಳಿ
ಸಮ್ಮಿಶ್ರ ಸರಕಾರ ಪತನಗೊಳಿಸಿ ಬಿಜೆಪಿ ಸರಕಾರ ತರುವಲ್ಲಿ ತೆರೆಮರೆಯಲ್ಲಿ ಬಾಲಚಂದ್ರ ಜಾರಕಿಹೊಳಿ ಕೂಡ ಬಹಳಷ್ಟು ಕೆಲಸ ಮಾಡಿದ್ದರು.
15 ವರ್ಷದ ನಂತರ…
2004ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಬಂದಾಗಿನಿಂದ ಈವರೆಗೂ ಜಾರಕಿಹೊಳಿ ಕುಟುಂಬದ ಒಬ್ಬರಲ್ಲ ಒಬ್ಬರು ಮಂತ್ರಿಯಾಗಿಯೇ ಇದ್ದರು. ಯಾವುದೇ ಸರಕಾರ ಅಸ್ಥಿತ್ವಕ್ಕೆ ಬಂದರು ಜಾರಕಿಹೊಳಿ ಸಹೋದರರಲ್ಲಿ ಒಬ್ಬರು ಸ್ಥಾನ ಪಡೆಯುತ್ತಿದ್ದರು.
ಇದನ್ನೂ ಓದಿ – ಇದೇನಿದು, ಮಧ್ಯರಾತ್ರಿ ಹೊರಬಿದ್ದ ಅಚ್ಛರಿಯ ಪಟ್ಟಿ?
ಮೊದಲು ಸತೀಶ್, ನಂತರ ಬಾಲಚಂದ್ರ ಮತ್ತು ಸಿದ್ದರಾಮಯ್ಯ ಸರಕಾರದಲ್ಲಿ ರಮೇಶ್ ಜಾರಕಿಹೊಳಿ ಸಚಿವಸ್ಥಾನ ಪಡೆದಿದ್ದರು. ಈಗಲೂ ಅವರ ಕುಟುಂಬದಲ್ಲಿ ಎರಡೆರಡು ಜನ ಮಂತ್ರಿಯಾಗಲಿದ್ದಾರೆ ಎನ್ನಲಾಗಿತ್ತು. ಈಗ ಒಬ್ಬರಿಗೂ ಸ್ಥಾನ ಸಿಕ್ಕದಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.
ಇದೆಲ್ಲಕ್ಕಿಂತ ದೊಡ್ಡ ಶಾಕ್ ಅಥಣಿ ಮಾಜಿ ಶಾಸಕ ಲಕ್ಷ್ಮಣ ಸವದಿಗೆ ಸಚಿವಸ್ಥಾನ ನೀಡಿದ್ದು. ಅತೃಪ್ತ ಶಾಸಕರ ನಾಯಕ ರಮೇಶ ಜಾರಕಿಹೊಳಿ ಅವರ ಕಟ್ಟಾ ವಿರೋಧಿ ಲಕ್ಷ್ಮಣ ಸವದಿ. ಲಕ್ಷ್ಮಣ ಸವದಿ ಅವರನ್ನು ಸೋಲಿಸಲೆಂದೇ ರಮೇಶ್ ಜಾರಕಿಹೊಳಿ ಅಥಣಿಯಲ್ಲಿ ಠಿಕಾಣಿ ಹೂಡಿದ್ದರು. ಕಳೆದ ಚುನಾವಣೆಯಲ್ಲಿ ತಮ್ಮ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದಕ್ಕಿಂದ ಹೆಚ್ಚು ಅಥಣಿ ಕ್ಷೇತ್ರದಲ್ಲಿ, ಲಕ್ಷ್ಮಣ ಸವದಿ ವಿರುದ್ಧ ರಮೇಶ್ ಕೆಲಸ ಮಾಡಿದ್ದರು.
ಸಂಬಂಧಿಸಿದ ಸುದ್ದಿ – ಸರ್ಕಾರ ಕೆಡವಿ ಬಿಡುತ್ತೇನೆ ಎನ್ನುವುದು ಬಾಯ್ತಪ್ಪಿನಿಂದ ಬಂದ ಹೇಳಿಕೆ -ಜಾರಕಿಹೊಳಿ
ರಮೇಶ್ ಅವರ ಈ ಸಹಾಯಕ್ಕಾಗಿಯೇ ಮಹೇಶ್ ಕುಮಠಳ್ಳಿ ಅವರ ಬೆನ್ನಿಗೆ ನಿಂತು ಶಾಸಕಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಆದರೆ ಇದೀಗ ಶಾಸಕರೂ ಅಲ್ಲದ ಲಕ್ಷ್ಮಣ ಸವದಿಗೆ ಸಚಿವಸ್ಥಾನ ನೀಡಿದ್ದರ ಹಿಂದೆ ಜಾರಕಿಹೊಳಿ ಕುಟುಂಬದ ಪ್ರಾಬಲ್ಯ ತಗ್ಗಿಸುವ ಉದ್ದೇಶವಿದೆಯೇ ಎನ್ನುವ ಪ್ರಶ್ನೆ ಮೂಡಿದೆ.
ಈ ಬೆಳವಣಿ್ಗೆ ಮುಂದಿನ ದಿನಗಳಲ್ಲಿ ಯಾವರೀತಿಯ ರಾಜಕೀಯ ತಿರುವಿಗೆ ಕಾರಣವಾಗುತ್ತದೆ? ಹೇಗೆ ನಿಭಾಯಿಸಲಾಗುತ್ತದೆ ಕಾದು ನೋಡಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ