
ಪ್ರಗತಿವಾಹಿನಿ ಸುದ್ದಿ: ಅತ್ಯಂತ ಶ್ರೀಮಂತ ಶಾಸಕ ಎಂದೇ ಹೆಸರಾಗಿರುವ 3000 ಕೋಟಿ ಆಸ್ತಿ ಒಡೆಯ ಬಿಜೆಪಿ ಶಾಸಕನೊಬ್ಬ ಭಿಕ್ಷುಕನಂತೆ ವೇಷ ತೊಟ್ಟು ಒಂದು ಇಡೀ ದಿನ ಬಿಕ್ಷಾಟನೆ ಮಾಡುವ ಮೂಲಕ ಗಮನಸೆಳೆದಿರುವ ಘಟನೆ ನಡೆದಿದೆ.
ಮಹಾರಾಷ್ಟ್ರದ ಘಾಟ್ಕೋಪರ್ ಪೂರ್ವ ಕ್ಷೇತ್ರದ ಬಿಜೆಪಿ ಶಾಸಕ ಪರಾಗ್ ಶಾ ಭಿಕ್ಷುಕನಂತೆ ವೇಷ ತೊಟ್ಟು ರಸ್ತೆಯಲ್ಲಿ ಓಡಾಡುತ್ತಾ, ರಸ್ತೆ ಬದಿ ಜನರು ಭಿಕ್ಷೆ ನೀಡಿದ ಊಟ, ತಿಂಡಿ ಸೇವಿಸಿ ಭಿಕ್ಷಾಟನೆ ಮಾಡಿರುವ ಘಟನೆ ನಡೆದಿದೆ.
ಶಾಸಕರ ಈ ನಡೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಜೈನ ಧರ್ಮಗುರು ನಮ್ರಮುನಿ ಅವರ ಸಲಹೆಯಂತೆ ಪರಾಗ್ ಶಾ ಒಂದು ದಿನ ಭಿಕ್ಷುಕನ ಜೀವನವನ್ನು ಅನುಭವಿಸಲು ಮುಂದಾಗಿದ್ದರು.
ಪ್ರಸ್ತುತ ಜೈನ ಸಮುದಾಯದ ಚಾತುರ್ಮಾಸ ನಡೆಯುತ್ತಿದ್ದು, ಇದೇ ಸಂದರ್ಭದಲ್ಲಿ ಗುರುಗಳು ಅವರಿಗೆ ಭಿಕ್ಷುಕನಾಗಿ ಒಂದು ದಿನ ಕಳೆಯುವ ಅನುಭವ ಪಡೆಯುವಂತೆ ಸೂಚಿಸಿದ್ದರಂತೆ. ಗುರುಗಳ ಸಲಹೆಯನ್ನು ಪಾಲಿಸಿದ ಪರಾಗ್ ಶಾ ತಮ್ಮ ಭದ್ರತಾ ಸಿಬ್ಬಂದಿ, ಕಾರುಗಳು ಹಾಗೂ ಐಷಾರಾಮಿ ಜೀವನವನ್ನು ಬದಿಗಿಟ್ಟು ಭಿಕ್ಷುಕನ ವೇಷ ಧರಿಸಿ ಘಾಟ್ಕೋಪರ್ನ ವಿವಿಧ ರಸ್ತೆಗಳಲ್ಲಿ ಸಾಮಾನ್ಯ ಭಿಕ್ಷುಕನಂತೆ ಓಡಾಡಿ ಭಿಕ್ಷಾಟನೆ ಮಾಡಿದ್ದಾರೆ.
ಈ ವೇಳೆ ಅವರು ಜನರ ಬಳಿ ಭಿಕ್ಷೆ ಬೇಡಿದ್ದಾರೆ. ರಸ್ತೆ ಬದಿಯಲ್ಲಿ ಭಿಕ್ಷುಕರಂತೆ ಕುಳಿತುಕೊಂಡು, ಭಿಕ್ಷೆಯಾಗಿ ದೊರೆತ ಆಹಾರವನ್ನೇ ಸೇವಿಸಿದ್ದಾರೆ. ವಿಶೇಷವೆಂದರೆ, ಈ ವೇಳೆ ಅವರೊಂದಿಗೆ ಇದ್ದ ಬಹುತೇಕ ಜನರಿಗೆ ಅವರು ಪರಾಗ್ ಶಾ ಎಂಬುದು ತಿಳಿದಿರಲಿಲ್ಲ. ತಮ್ಮ ಗುರುಗಳ ಸಲಹೆಯಂತೆ ಭಿಕ್ಷುಕನ ಜೀವನವನ್ನು ಅನುಭವಿಸಿದ ಬಳಿಕ ಪರಾಗ್ ಶಾ ಈ ಅನುಭವವನ್ನು ಗುರುಗಳು ಹಾಗೂ ಇತರರೊಂದಿಗೆ ಹಂಚಿಕೊಂಡಿದ್ದಾರೆ.
2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸಲ್ಲಿಸಿದ್ದ ಚುನಾವಣಾ ಅಫಿಡವಿಟ್ನಲ್ಲಿ ಅವರು 3,383 ಕೋಟಿಗೂ ಅಧಿಕ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದರು. ಇದರೊಂದಿಗೆ ಅವರು ಮಹಾರಾಷ್ಟ್ರದ ಅತ್ಯಂತ ಶ್ರೀಮಂತ ಚುನಾವಣಾ ಅಭ್ಯರ್ಥಿಗಳಲ್ಲಿ ಪ್ರಮುಖರಾಗಿದ್ದರು.
ಐದು ವರ್ಷಗಳ ಹಿಂದೆ ಅವರ ಘೋಷಿತ ಆಸ್ತಿ ಸುಮಾರು 500 ಕೋಟಿಯಷ್ಟಿತ್ತು ಎಂದು ವರದಿಯಾಗಿದೆ. ಸಾವಿರಾರು ಕೋಟಿ ಒಡೆಯ, ಶ್ರೀಮಂತ ಶಾಸಕ ಭಿಕ್ಷುಕನಂತೆ ವೇಷ ಧರಿಸಿ ಇಡೀ ದಿನ ಭಿಕ್ಷಾಟನೆ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.



