Kannada NewsKarnataka NewsLatest

*ಸರ್ಕಾರಿ ಸಂಬಳ ಪಡೆದು ಶಾಸಕನ ಸೊಸೆಯಿಂದಲೇ ಕರ್ತವ್ಯ ಲೋಪ: ಮಗಳನ್ನು ವೈದ್ಯಾಧಿಕಾರಿ ಸೇವೆಯಿಂದಲೇ ಬಿಡುಗಡೆಗೊಳಿಸಿದ ಡಿಹೆಚ್ ಒ ತಂದೆ*

ಪ್ರಗತಿವಾಹಿನಿ ಸುದ್ದಿ: ಶಾಸಕ ಉಮೇಶ್ ಮೇಟಿ ಅವರ ಸೊಸೆ ಡಾ. ಅಂಕಿತಾ ಯರಗಲ್ ಅವರ ಅಕ್ರಮ ಬಯಲಾಗಿದೆ. ಬಾಗಲಕೋಟೆ ಜಿಲ್ಲೆಯ ವಾಂಬೆ ಕಾಲೋನಿಯ ನಮ್ಮ ಕ್ಲಿನಿಕ್‌ನಲ್ಲಿ ವೈದ್ಯಾಧಿಕಾರಿಯಾಗಿದ್ದುಕೊಂಡೇ ನಿಯಮಬಾಹಿರವಾಗಿ ವೈದ್ಯಕೀಯ ಸ್ನಾತಕೋತ್ತರ (PG) ವ್ಯಾಸಂಗ ಮಾಡುತ್ತಿದ್ದ ಡಾ. ಅಂಕಿತಾ ಯರಗಲ್ ಅವರನ್ನು ಗುತ್ತಿಗೆ ಸೇವೆಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಬಿಡುಗಡೆಗೊಳಿಸಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜಕುಮಾರ ಯರಗಲ್ ಆದೇಶ ಹೊರಡಿಸಿದ್ದಾರೆ.

ಹಾಲಿ ಜಿಲ್ಲಾ ಆರೋಗ್ಯಧಿಕಾರಿಯಾಗಿರುವ ಡಾ. ರಾಜಕುಮಾರ ಯರಗಲ್ ಅವರ ಪುತ್ರಿ ಹಾಗೂ ಹಾಲಿ ಶಾಸಕ ಉಮೇಶ್ ಮೇಟಿ ಅವರ ಸೊಸೆ ಡಾ. ಅಂಕಿತಾ ಯರಗಲ್. ಅವರು ನಮ್ಮ ಕ್ಲಿನಿಕ್‌ನಲ್ಲಿ ವೈದ್ಯಾಧಿಕಾರಿಯಾಗಿ ನೇಮಕಗೊಂಡಿದರು.

Home add -Advt

ಅಂಕಿತಾ ನಮ್ಮ ಕ್ಲಿನಿಕ್‌ನಲ್ಲಿ ಕರ್ತವ್ಯ ನಿರ್ವಹಿಸದೆ ಪಿಜಿ ಅಧ್ಯಯನ ಮಾಡುತ್ತಿದ್ದ ಬಗ್ಗೆ ಹಾಗೂ ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕಿ 75 ಸಾವಿರ ರೂ. ಸರ್ಕಾರಿ ವೇತನ ಪಡೆದು ಕರ್ತವ್ಯ ಲೋಪ ವೆಸಗುತ್ತಿದ್ದ ಬಗ್ಗೆ ಆರೋಪ ಕೇಳಿಬಂದಿತ್ತು.

ಇಲಾಖೆಯ ಗಮನಕ್ಕೆ ತರದೆ ವೈದ್ಯಕೀಯ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದು, ಕೇವಲ ಬಿಡುವಿನ ವೇಳೆಯಲ್ಲಿ ವಾಂಬೆ ಕಾಲೋನಿಯ ನಮ್ಮ ಕ್ಲಿನಿಕ್‌ನಲ್ಲಿ ಬಂದು ಸಹಿ ಮಾಡುತ್ತಿದ್ದರು ಎನ್ನಲಾಗಿದೆ.

ಕಳೆದ ಆಗಸ್ಟ್ 28 ರಿಂದ ವೈದ್ಯಾಧಿಕಾರಿ ಅನಧಿಕೃತವಾಗಿ ಕರ್ತವ್ಯಕ್ಕೆ ಗೈರುಹಾಜರಾಗಿದ್ದು, ಈ ವಿಚಾರವನ್ನು ತಾಲೂಕು ಆರೋಗ್ಯಾಧಿಕಾರಿಗಳಿಗಾಗಲಿ ಅಥವಾ ಆರೋಗ್ಯ ಇಲಾಖೆಯ ಯಾವುದೇ ಹಿರಿಯ ಅಧಿಕಾರಿಗಳ ಗಮನಕ್ಕಾಗಲಿ ತಂದಿರಲಿಲ್ಲ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಜಿಲ್ಲಾ ಆರೋಗ್ಯಾಧಿಕಾರಿಯಾಗಿರುವ ಅಂಕಿತಾ ಅವರ ತಂದೆ ಡಾ.ರಾಜಕುಮಾರ್ ಯರಗಲ್ ಮಗಳನ್ನು ಸೇವೆಯಿಂದ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದ್ದಾರೆ.

ಈ ಅವಧಿಯಲ್ಲಿ ಸರ್ಕಾರಕ್ಕೆ ಯಾವುದೇ ರೀತಿಯ ಆರ್ಥಿಕ ನಷ್ಟ ಉಂಟಾಗಿದ್ದರೆ, ಅದನ್ನು ನಿಯಮಾನುಸಾರ ಅವರ ಬಳಿಯಿಂದಲೇ ವಸೂಲಿ ಮಾಡಿಕೊಳ್ಳಲಾಗುವುದು.ಈ ಆದೇಶಕ್ಕೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆ ಅಥವಾ ಅಹವಾಲುಗಳಿದ್ದಲ್ಲಿ ಲಿಖಿತ ರೂಪದಲ್ಲಿ ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಲಾಗಿದೆ.

Related Articles

Back to top button