Kannada NewsKarnataka NewsLatestPolitics

*ಸ್ವಚ್ಚತೆ, ನೈರ್ಮಲ್ಯ ಸಂರಕ್ಷಣೆಗಾಗಿ ಸ್ಥಳೀಯ ಸಂಸ್ಥೆಗಳಿಗೆ 2 ಸಾವಿರ ಕೋಟಿ ಅನುದಾನ; ಡಿಸಿಎಂ*

ಎಲ್ಲೆಂದರಲ್ಲಿ ಕಟ್ಟಡ ತ್ಯಾಜ್ಯ ಎಸೆದರೆ ದಂಡ ವಿಧಿಸಲು ಸೂಚನೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಸ ವಿಲೇವಾರಿ, ಸ್ವಚ್ಚತೆ, ನೈರ್ಮಲ್ಯ ಸಂರಕ್ಷಣೆಗೆ ಸುಮಾರು ₹2 ಸಾವಿರ ಕೋಟಿ ಹಣ ಹಂಚಿಕೆ ಕುರಿತು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ನಗರದ ಅರಮನೆ ಮೈದಾನದಲ್ಲಿ ನಡೆದ 17 ನೇ ಅಂತರರಾಷ್ಟ್ರೀಯ ಮುನಿಸಿಪಾಲಿಕ- 23 ಸಮ್ಮೇಳನದ ವಸ್ತುಪ್ರದರ್ಶನ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, “ಬಿಡಿಎ, ಬಿಬಿಎಂಪಿ ವ್ಯಾಪ್ತಿಯ ಆಸ್ತಿಗಳು ಇದಕ್ಕೆ ಒಳಪಡಲಿದ್ದು, ಬೆಂಗಳೂರಿನ ಆಸ್ತಿ ಪತ್ರ ಮತ್ತು ದಾಖಲೆಗಳನ್ನು ಡಿಜಿಟಲೀಕರಣ ಮಾಡಿ ಕೆಲವೇ ದಿನಗಳಲ್ಲಿ ಸ್ವತ್ತಿನ ಪತ್ರಗಳನ್ನು ಜನರ ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸಲಾಗುವುದು ಎಂದರು.

ನವದೆಹಲಿ, ಚಂಡೀಗಡದಂತೆ ನಮ್ಮ ರಾಜ್ಯಗಳಲ್ಲಿ ಯೋಜಿತವಾದ ನಗರಗಳಿಲ್ಲ. 20 ವರ್ಷಗಳ ಹಿಂದೆಯೇ ಕಾಂಗ್ರೆಸ್ ಸರ್ಕಾರ ಭೂಮಿ ತಂತ್ರಾಶದ ಮೂಲಕ ಪಹಣಿ ನೀಡುವ ಯೋಜನೆ ಜಾರಿಗೆ ತಂದಿತ್ತು. ಪ್ರಸ್ತುತ ಆಸ್ತಿಮೌಲ್ಯವನ್ನು ನಿಖರವಾಗಿ ಲೆಕ್ಕಾಚಾರ ಮಾಡಲು ಅನೇಕ ತಂತ್ರಜ್ಞಾನಗಳು ನಮ್ಮ ನಡುವೆ ಇವೆ. ಡ್ರೋನ್ ಸೇರಿದಂತೆ ಇತರೇ ತಂತ್ರಜ್ಞಾನ ಬಳಸಿ ನಿಖರವಾಗಿ ಆಸ್ತಿಮೌಲ್ಯವನ್ನು ಲೆಕ್ಕ ಹಾಕಲಾಗುವುದು.

ಸರ್ಕಾರದಿಂದ ಬರಬೇಕಾದ ಅನುದಾನ ಜನಸಂಖ್ಯೆಗೆ ಅನುಗುಣವಾಗಿ ಬಂದೇ ಬರುತ್ತದೆ. ಆದರೆ, ಹೆಚ್ಚಿನ ತೆರಿಗೆ ಸಂಗ್ರಹದ ಮೂಲಕ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರದಲ್ಲಿ ಇರುವವರು ಅವರ ಕ್ಷೇತ್ರಗಳನ್ನು ಆರ್ಥಿಕವಾಗಿ ಸದೃಢ ಮಾಡಬೇಕು. ನಿಮ್ಮ ಆದಾಯವನ್ನು ನೀವೆ ಉತ್ಪತ್ತಿ ಮಾಡಿಕೊಂಡು, ಸರ್ಕಾರದ ಯಾವುದೇ ಸಹಾಯವೇ ಇಲ್ಲದೇ ಬಲಿಷ್ಠವಾಗಬೇಕು.

ಒಂದಷ್ಟು ಜನರು ಒಂದು ಅಂತಸ್ತಿನ ಕಟ್ಟಡ ಕಟ್ಟಲು ಅನುಮತಿ ಪಡೆದುಕೊಂಡು ನಾಲ್ಕು ಅಂತಸ್ತಿನ ಕಟ್ಟಡ ಕಟ್ಟಿರುತ್ತಾರೆ. ಇಂತಹ ಕಟ್ಟಡಗಳನ್ನು ಗುರುತಿಸಬೇಕು. ರಾಜಕೀಯ ಒತ್ತಡಗಳಿಗೆ ಅಧಿಕಾರಿಗಳು ಒಳಗಾಗದೆ, ಆಸ್ತಿ ಮೌಲ್ಯಗಳನ್ನು ಸರಿಯಾಗಿ ಗುರುತಿಸಿ ತೆರಿಗೆ ಸಂಗ್ರಹ ಮಾಡಬೇಕು.

ಹುಡ್ಕೋ ಅಧ್ಯಕ್ಷರು ಮಂಗಳವಾರ ಬೆಳಿಗ್ಗೆ ಮನೆಗೆ ಬಂದು ಭೇಟಿ ಮಾಡಿ, ಹೆಚ್ಚು ತೆರಿಗೆ ಸಂಗ್ರಹ ಮಾಡುವ ಸ್ಥಳೀಯ ಸಂಸ್ಥೆಗಳ ಅಭಿವೃದ್ದಿಗೆ ಸಾಕಷ್ಟು ಧನಸಹಾಯ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪಂಪ್ ಮಾಡಿ ನೀರನ್ನು ತರುವ ವೆಚ್ಚ ಹೆಚ್ಚುತ್ತಿದ್ದು, ಕಳೆದ 12 ವರ್ಷಗಳಿಂದ ಬೆಂಗಳೂರಿನಲ್ಲಿ ನೀರಿನ ದರವನ್ನು ರಾಜಕೀಯ ಕಾರಣಗಳಿಂದ ಏರಿಕೆ ಮಾಡಿಲ್ಲ. ನೀರು ಅತ್ಯಮೂಲ್ಯವಾದುದು ಆದ ಕಾರಣ ಲೆಕ್ಕಾಚಾರದಿಂದ ಸ್ಥಳೀಯ ಸಂಸ್ಥೆಗಳು ನೀರು ಸರಬರಾಜು ಮಾಡಬೇಕು.

ಪ್ರತಿ ಊರಿನಲ್ಲಿ ಎಷ್ಟು ಕೊಳವೆಬಾವಿಗಳನ್ನು ಕೊರೆಯುತ್ತಿದ್ದಾರೆ, ಎಷ್ಟು ಆಳ ಕೊರೆಯುತ್ತಿದ್ದಾರೆ ಎನ್ನುವ ಲೆಕ್ಕ ಸ್ಥಳೀಯ ಸಂಸ್ಥೆಗಳ ಬಳಿ ಇರಬೇಕು. ಕೊಳವೆ ಬಾವಿ ಕೊರೆಯಲು ಅನುಮತಿ ಸೇರಿದಂತೆ ಇತರೇ ಮಾರ್ಗಸೂಚಿಗಳನ್ನು ಅಧಿಕಾರಿಗಳು ಅನುಸರಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಈ ಬಗ್ಗೆ ಮಾರ್ಗಸೂಚಿಗಳಿದ್ದು ಇದನ್ನು ಸರಿಯಾಗಿ ಪಾಲಿಸಬೇಕು.

ಕನಿಷ್ಟ ರೂ. 50 ಶುಲ್ಕ ನಿಗದಿ ಮಾಡಿದರೆ, ಒಟ್ಟು ಕೊಳವೆಬಾವಿಗಳ ಲೆಕ್ಕ ಸರ್ಕಾರಕ್ಕೆ ಸಿಗುತ್ತದೆ. ಜನರಿಂದ ಹಣ ವಸೂಲಿ ಮಾಡಬೇಕು ಎನ್ನುವ ಅರ್ಥದಲ್ಲಿ ನಾನು ಹೇಳುತ್ತಿಲ್ಲ ಹಾಗೂ ಈ ಹಣದಿಂದ ಸರ್ಕಾರಕ್ಕೆ ಯಾವುದೇ ಆದಾಯ ಬರುವುದಿಲ್ಲ ಆದರೆ ಕೃಷಿ, ಗೃಹೋಪಯೋಗಿ, ವಾಣಿಜ್ಯ ಬಳಕೆಗೆ ಎಷ್ಟು ಕೊಳವೆಬಾವಿಗಳನ್ನು ಬಳಸಲಾಗುತ್ತಿದೆ ಎನ್ನುವ ಮಾಹಿತಿ ದೊರೆಯುತ್ತದೆ.

ಪ್ರತಿಯೊಂದು ಹನಿ ನೀರನ್ನು ವಿಚಾರವಂತಿಕೆಯಿಂದ ಬಳಸುವ ಕೆಲಸವಾಗಬೇಕಿದೆ. ಇದು ಸ್ಥಳೀಯ ಸಂಸ್ಥೆಗಳ ಮೊದಲ ಆದ್ಯತೆಯಾಗಬೇಕಿದೆ. ಕೆಲವು ಪಟ್ಟಣಗಳಲ್ಲಿ ವಾರಕ್ಕೊಮ್ಮೆ ನೀರು ಸರಬರಾಜು ಮಾಡುವ ಪರಿಸ್ಥಿತಿಯಿದೆ. ಕುಡಿಯುವ ನೀರನ್ನೇ ಬಟ್ಟೆ, ವಾಹನ, ಮನೆ ತೊಳೆಯಲು ಬಳಸುತ್ತಿದ್ದಾರೆ. ಅತ್ಯಮೂಲ್ಯವಾದ ನೀರನ್ನು ಹೀಗೆ ಬಳಸಬಾರದು ಎಂದು ಜನರಲ್ಲಿ ಅರಿವು ಮೂಡಿಸಬೇಕು. ಅಂತರ್ಜಲ ನೀರಿನ ಬಳಕೆ, ಅದರ ಮಾಲಿನ್ಯದ ವಿರುದ್ದ ಜಾಗೃತಿ ಮೂಡಿಸಬೇಕು. ಹನಿ ನೀರಿನ ಬಳಕೆಯ ಲೆಕ್ಕಾಚಾರವೂ ಜನಪ್ರತಿನಿದಿಗಳ ಬಳಿ ಇರಬೇಕು ಎಂದರು.

ರೈತ ಹಾಲು ಉತ್ಪಾದಿಸಲು ಸಾಕಷ್ಟು ಶ್ರಮವಹಿಸಿದರು, ಒಂದು ಲೀಟರ್ ಹಾಲಿಗೆ 35- 40 ರೂಪಾಯಿ ಸಿಗುತ್ತದೆ. ಆದರೆ ನೀರಿನ ಬಾಟಲಿಗೆ 20 ರೂ ನೀಡುತ್ತಿದ್ದೇವೆ. ಶುದ್ಧ ಕುಡಿಯುವ ನೀರಿನ ಬಗ್ಗೆ ಸ್ಥಳೀಯ ಸಂಸ್ಥೆಗಳು ಸಾಕಷ್ಟು ಕ್ರಮ ವಹಿಸಬೇಕು.

ಕರ್ನಾಟಕದ ಜನಸಂಖ್ಯೆಯ 7 ಕೋಟಿ ಶೇ 40 ರಷ್ಟು ಅಂದರೆ 3.25 ಕೋಟಿ ಜನರು ನಗರ ಪ್ರದೇಶಗಳಲ್ಲಿ ವಾಸವಿದ್ದಾರೆ. ಬೆಂಗಳೂರಿನ ಜನಸಂಖ್ಯೆ 1 ಕೋಟಿ 40 ಲಕ್ಷಕ್ಕೆ ಮುಟ್ಟಿದೆ. ಏಕೆ ಜನರು ನಗರ ಪ್ರದೇಶಗಳಿಗೆ ಬರುತ್ತಿದ್ದಾರೆ ಎನ್ನುವ ಕುರಿತು ನಾವೆಲ್ಲಾ ಯೋಚನೆ ಮಾಡಬೇಕಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳು ಕಸ ವಿಲೇವಾರಿಯನ್ನು ವೈಜ್ಞಾನಿಕವಾಗಿ ಮಾಡಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಕಟ್ಟು ನಿಟ್ಟಿನ ಆದೇಶ ನೀಡಿದ್ದು, ನಗರದ ಸ್ವಚ್ಚತೆ, ನೈರ್ಮಲ್ಯದ ಬಗ್ಗೆ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಕರ್ನಾಟಕಕ್ಕೆ ಬೆಂಗಳೂರು ಹೃದಯ. ಪ್ರತಿ ಜಿಲ್ಲೆಯ, ತಾಲ್ಲೂಕಿನ ನಗರಗಳು ಹೃದಯಗಳಂತೆ ತಿಳಿದು ಅವುಗಳನ್ನು ಕಾಪಾಡಬೇಕು.

ಕಟ್ಟಡ ತ್ಯಾಜ್ಯ (ಡೆಬ್ರಿಸ್) ಗಳನ್ನು ಎಲ್ಲೆಂದರಲ್ಲಿ ಸುರಿಯುವ ಕೆಟ್ಟ ಚಾಳಿಯನ್ನು ಜನ ಬೆಳೆಸಿಕೊಂಡಿದ್ದಾರೆ. ಇದಕ್ಕೆ ಅಲ್ಲಲ್ಲಿ ಕ್ಯಾಮೆರಾಗಳನ್ನು ಅಳವಡಿಸಿ, ದಂಡ ವಿಧಿಸಬೇಕು. ನಗರದ ಕೆರೆ, ಉದ್ಯಾನಗಳ ಸುಂದರೀಕರಣ, ಹಸಿರೀಕರಣ ಮಾಡಬೇಕು ಹಾಗೂ ಮಳೆ ನೀರು ಕೆರೆಗೆ ಹರಿಯುಂತೆ ವ್ಯವಸ್ಥೆ ಮಾಡಬೇಕು. ರಸ್ತೆಗುಂಡಿಗಳನ್ನು ಮುಚ್ಚಲು ಎಂಜಿನಿಯರ್ಗಳಿಗೆ ಸೂಚನೆ ನೀಡಬೇಕು. ಸಂಚಾರ ದಟ್ಟಣೆ ಸೇರಿದಂತೆ ಎಲ್ಲಾ ವಿಚಾರಗಳಲ್ಲಿ ಗಮನ ಹರಿಸಬೇಕು.

ಎಲ್ಲಾ ಸ್ಥಳೀಯ ಸಂಸ್ಥೆಗಳು ರಸ್ತೆಬದಿ ಗಿಡಗಳನ್ನು ನೆಡಲು ಶಾಲೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಬೇಕು. ಈಗಾಗಲೇ ಸುಮಾರು 50 ಸಾವಿರಕ್ಕೂ ಹೆಚ್ಚು ಮಕ್ಕಳು ಬೆಂಗಳೂರು ನಗರದಲ್ಲಿ ಸಸಿಗಳನ್ನು ಕಾಪಾಡುವ, ನಿರ್ವಹಣೆ ಮಾಡುವ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ನಮ್ಮ ಮನೆಗಳ ಒಳಗೆ ಹಸಿರು ಇರಬೇಕು ಎಂದು ಗಿಡಗಳನ್ನು ಬೆಳೆಸುತ್ತೇವೆ. ಪ್ರಕೃತಿಗೂ ಮನುಷ್ಯನಿಗೂ ಬಿಡಿಸಲಾಗದ ಸಂಬಂಧ ಇದಕ್ಕೆ ನಾವು ಶಕ್ತಿ ತುಂಬಬೇಕು ಎಂದು ಹೇಳಿದರು.

ಆದಾಯ ಹೆಚ್ಚಳ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಬಲವರ್ಧನೆಗೆ ನಾನು, ಬೈರತಿ ಸುರೇಶ್ ಮತ್ತು ಪೌರಾಡಳಿತ ಸಚಿವರಾದ ರಹೀಂಖಾನ್ ಅವರು ಸೇರಿ ಸಭೆ ನಡೆಸಿ ಸೂಕ್ತ ತೀರ್ಮಾನಕ್ಕೆ ಬರುತ್ತೇವೆ.

ಸಂವಿಧಾನದ 73, 74ನೇ ತಿದ್ದುಪಡಿಯ ಮೂಲಕ ಜಾರಿಗೆ ಬಂದ ಸ್ಥಳೀಯ ಸಂಸ್ಥೆಗಳಿಂದ ಸಾವಿರಾರು ನಾಯಕರು ಬೆಳೆದು ಬಂದಿದ್ದಾರೆ. ಹಳ್ಳಿಯಿಂದ ಬಂದ ನಾನು ಈ ರಾಜ್ಯದ ಡಿಸಿಎಂ ಸ್ಥಾನಕ್ಕೆ ಏರಿದ್ದೇನೆ. ಈ ದೇಶದ ಮೊದಲ ಪ್ರಧಾನಿ ಜವಹರ ಲಾಲ್ ನೆಹರು ಅವರು ಉನ್ನತ ಹುದ್ದೆಗೆ ಏರುವ ಮೊದಲು ಅಲಹಬಾದ್ ಮುನಿಸಿಪಲ್ ಕಾರ್ಪೋರೇಷನ್ ಅಧ್ಯಕ್ಷರಾಗಿದ್ದರು. ಸುಭಾಷ್ ಚಂದ್ರ ಬೋಸ್ ಕಲ್ಕತ್ತಾ ಮುನಿಸಿಪಲ್ ನ ಕಮಿಷನರ್, ರಾಜಗೋಪಾಲ್ಚಾರಿ, ಕೆಂಗಲ್ ಹನುಮಂತಯ್ಯ ಸೇರಿದಂತೆ ನೂರಾರು ನಾಯಕರು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆದ್ದು ನಾಯಕರಾಗಿ ಹೊರಹೊಮ್ಮಿದ್ದಾರೆ. ಬೆಂಗಳೂರಿನಲ್ಲಿ ಸ್ಥಳೀಯ ಸಂಸ್ಥೆಗಳ ಸದಸ್ಯರಾಗಿದ್ದವರು ಇಂದು ದೊಡ್ಡನಾಯಕರಾಗಿ ಬೆಳೆದಿದ್ದಾರೆ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button