ಕನ್ನಡಿಗರ ಮೇಲೆ ಹಲ್ಲೆ ನಡೆಸಲು ತಮಿಳರನ್ನು ಎತ್ತಿ ಕಟ್ಟಿದ್ರಾ ಸಚಿವ ಮುನಿರತ್ನ?; ಕಾಂಗ್ರೆಸ್ ನಿಂದ ದೂರು ದಾಖಲು
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಚಿವ ಮುನಿರತ್ನ ಮಾಡಿರುವ ಪ್ರಚೋದನಕಾರಿ ಭಾಷಣ ವೈರಲ್ ಆಗಿದ್ದು, ಸಚಿವರು ಕನ್ನಡಿಗರ ಮೇಲೆ ಹಲ್ಲೆ ನಡೆಸುವಂತೆ ತಮಿಳರನ್ನು ಎತ್ತಿಕಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಬೆಂಗಳೂರಿನ ಜಾಲಹಳ್ಳಿ ವಾರ್ಡ್ ನ ಖಾತಾನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಷಣ ಮಾಡಿರುವ ಮುನಿರತ್ನ, ಚುನಾವಣೆ ದಿನ ಯಾರಾದ್ರೂ ಒಳಗಡೆ ಬಂದ್ರೆ ಓಡಾಡಿಸಿಕೊಂಡು ಹೊಡಿರಿ ಎಂದು ಹೇಳಿದ್ದಾರೆ.
ಯಾರಾದ್ರೂ ಒಳಗಡೆ ಬಂದ್ರೆ ಹೊಡಿರಿ. ಮಿಕ್ಕಿದ್ದು ನಾನು ನೋಡಿಕೊಳ್ತೇನೆ. ಯಾವಥರಹ ಹೊಡಿಬೇಕು ಅಂದ್ರೆ ಅವರು ತಿರುಗಿ ನೋಡಬಾರದು. ಆತರ ಹೊಡಿಬೇಕು. ಯಾರು ಯಾರು ಹೊಡಿತೀರಾ? ಕೈ ಎತ್ತಿ. ನಾಳೆ ವೋಟ್ ಹಾಕುವ ದಿನ ನಮ್ದು ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ.
ಸಚಿವ ಮುನಿರತ್ನ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ರಾಜರಾಜೇಶ್ವರಿ ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ, ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ತಮಿಳು ಭಾಷಿಕರು ಕನ್ನಡ ಭಾಷಿಕರ ಮೇಲೆ ಹಲ್ಲೆ ಮಾಡುವಂತೆ ಸಚಿವರು ಸೂಚನೆ ನೀಡಿರುವ ಹೇಳಿಕೆ ಸಮೇತ ದೂರು ನೀಡಿದ್ದು, ಕನ್ನಡಿಗರು ಹಾಗೂ ತಮಿಳರ ನಡುವಿನ ಸಂಘರ್ಷವುಂಟಾಗಲು ಕಾರಣರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ