ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ಅನುದಾನ ಕಡಿತಗೊಳಿಸಿರುವುದನ್ನು ಖಂಡಿಸಿ ವಿಧಾನಸೌಧ ಮುಂಭಾಗ ಏಕಾಂಗಿಯಾಗಿ ಪ್ರತಿಭಟನೆ ಕುಳಿತಿದ್ದ ಬಿಜೆಪಿ ಶಾಸಕ ಮುನಿರತ್ನ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮನವೊಲಿಕೆ ಬಳಿಕ ಪ್ರತಿಭಟನೆ ಹಿಂಪಡೆದಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪ ಮನವೊಲಿಕೆ ಬಳಿಕ ಧರಣಿ ಕೈಬಿಟ್ಟ ಶಾಸಕ ಮುನಿರತ್ನ, ಬೆಂಗಳೂರು ಅರಮನೆ ಮೈದಾನದಲ್ಲಿ ಕಂಬಳ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ಪ್ರತಿಭಟನಾ ಸ್ಥಳದಿಂದ ನೇರವಾಗಿ ಡಿ.ಕೆ.ಶಿವಕುಮಾರ್ ಇದ್ದಲ್ಲಿಗೆ ತೆರಳಿದರು.
ಕಾರ್ಯಕ್ರಮ ಮುಗಿಸಿ ಡಿ.ಕೆ.ಶಿವಕುಮಾರ್ ಹೊರಬರುತ್ತಿದ್ದಂತೆ ಅರಮನೆ ಮೈದಾನದಲ್ಲೇ ಡಿಸಿಎಂಗೆ ಮುಖಾಮುಖಿಯಾದ ಶಾಸಕ ಮುನಿರತ್ನ ಅನುದಾನ ಬಿಡುಗಡೆ ಕುರಿತು ತಮ್ಮ ಮನವಿ ಪತ್ರ ಸಲ್ಲಿಸಿ, ತಕ್ಷಣ ಅವರ ಕಾಲಿಗೆ ಬಿದ್ದು ಕೈಮುಗಿದು ಆರ್.ಆರ್. ನಗರ ಕ್ಷೇತ್ರಕ್ಕೆ ಅನುದಾನ ಬಿಡುಗಡೆಯಲ್ಲಿ ಆಗಿರುವ ತೊಡಕುಗಳನ್ನು ಸರಿಪಡಿಸುವಂತೆ ಕೇಳಿದರು.
ಶಾಸಕರ ಮನವಿಗೆ ಸ್ಪಂದಿಸಿದ ಡಿ.ಕೆ.ಶಿವಕುಮಾರ್, ಆದಷ್ಟು ಬೇಗ ಪರಿಶೀಲನೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದರು. ಅಲ್ಲದೇ ಸಾಧ್ಯವಾದರೆ ಇಂದೇ ಶಾಸಕರನ್ನು ಕರೆದು ಚರ್ಚಿಸುವುದಾಗಿ ತಿಳಿಸಿದರು.
ಬಳಿಕ ಶಾಸಕ ಮುನಿರತ್ನ ಅವರು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಮತ್ತೊಮ್ಮೆ ಭೇಟಿಯಾಗಿ ಕ್ಷೇತ್ರದ ಅನುದಾನದ ಬಗ್ಗೆ ಸಮಾಲೋಚನೆ ನಡೆಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ