Latest

ಕರ್ನಾಟಕ ಮಲ್ಲ ಪತ್ರಿಕಾ ಸಮೂಹದ ಮಾಲಕ ಮುರಳೀಧರ್ (ಬಾಬಾ) ಶಿಂಗೋಟೆ ನಿಧನ

 ಪ್ರಗತಿವಾಹಿನಿ ಸುದ್ದಿ, ಮುಂಬಯಿ-  ಪತ್ರಿಕೋದ್ಯಮದಲ್ಲಿ ಭಾಷಾ ಸಮನ್ವಯ -ಸಾಮರಸ್ಯದ ನಡೆಗೆ ಮುನ್ನುಡಿ ಬರೆದ, ತಾನೋರ್ವ ಮರಾಠಿಗರಾಗಿದ್ದರೂ ಕೂಡಾ ಮಹಾರಾಷ್ಟ್ರದಲ್ಲಿ ಕನ್ನಡ ಪತ್ರಿಕೆಯನ್ನು  ಬೆಳೆಸಿ ಕನ್ನಡ ಭಾಷೆಯ ಹಾಗೂ ಸಂಸ್ಕೃತಿಯ ಏಳಿಗೆಗೆ ಅಮೂಲ್ಯ ಕೊಡುಗೆಯನ್ನು ನೀಡಿದ ಮುಂಬಯಿ ಕನ್ನಡಿಗರ ಮನೆ ಮಾತಾಗಿರುವ  ಕನ್ನಡ ದೈನಿಕ  “ಕರ್ನಾಟಕ ಮಲ್ಲ” ದ ಮಾಲಕ ಮುರಳೀಧರ್ ಅನಂತ ಅಲಿಯಾಸ್ ಬಾಬಾ ಶಿಂಗೋಟೆ ನಿಧನರಾಗಿದ್ದಾರೆ.
ಜುನ್ನರ್ ತಾಲೂಕಿನ ಗೈಮುಖ್ ವಾಡಿಯ ಸ್ವಗೃಹದಲ್ಲಿ ಗುರುವಾರ  ಮಧ್ಯಾಹ್ನ 1 ಗಂಟೆಗೆ ಅವರು ನಿಧನರಾದರು.
ಮಾರ್ಚ್ 7, 1938 ರಂದು ಪುಣೆ ಜಿಲ್ಲೆಯ ಜುನ್ನಾರ್ ತಾಲ್ಲೂಕಿನ ಉಂಬ್ರಾಜ್ ಗ್ರಾಮದಲ್ಲಿ ಜನಿಸಿದ ಬಾಬಾ ಶಿಂಗೋಟೆ ನಾಲ್ಕನೇ ತರಗತಿ ತನಕ  ಕಲಿತು ಹೊಟ್ಟೆಪಾಡಿಗಾಗಿ ಮುಂಬೈ ತಲುಪಿದರು. ಆರಂಭದಲ್ಲಿ ಹಣ್ಣು ಮಾರಾಟ, ನಂತರ ಬುವಾಶೇಠ್ ದಾಂಗಟ್ ಅವರಲ್ಲಿ ಪತ್ರಿಕೆಗಳನ್ನು ವಿತರಿಸಲು ಪ್ರಾರಂಭಿಸಿದರು. ಆವಾಗಲೇ  ಸಾರ್ವಜನಿಕರಿಗೆ ತಿಳಿಯಬಲ್ಲ ಮತ್ತು ಅರ್ಥವಾಗುವಂತಹ ಭಾಷೆಯಲ್ಲಿ ಪತ್ರಿಕೆಯೊಂದನ್ನು  ಪ್ರಕಟಿಸುವ ಕನಸು ಕಂಡಿದ್ದರು.
1994 ರಲ್ಲಿ ಅವರು ಮುಂಬೈ ಚೌಫೇರ್ ಎಂಬ ಮರಾಠಿ ಭಾಷೆಯ ದಿನಪತ್ರಿಕೆಯನ್ನು ಪ್ರಕಟಿಸಿ ಇತರ ಭಾಷಾ ದಿನಪತ್ರಿಕೆಗಳಾದ ಕರ್ನಾಟಕ ಮಲ್ಲ, ದೈನಿಕ್ ಆಪ್ಲಾ ವಾರ್ತಾಹರ್, ದೈನಿಕ್ ಯಶೋಭೂಮಿ, ದೈನಿಕ್ ತಮಿಳ್ ಟೈಮ್ಸ್, ದೈನಿಕ್ ಹಿಂದ್ಮಾತಾ ಮತ್ತು ದೈನಿಕ್ ಪುಣ್ಯನಗರಿಯನ್ನು ಪ್ರಾರಂಭಿಸಿದರು.
ಅವರು ಪತ್ನಿ, ಮೂವರು ಗಂಡು ಮಕ್ಕಳು, ಮೂವರು ಪುತ್ರಿಯರು, ಸೊಸೆ ಮತ್ತು ಮೊಮ್ಮಕ್ಕಳನ್ನು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಅವರ ಹುಟ್ಟೂರಿನಲ್ಲೇ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ಮಾಡಲಾಯಿತು.
ಮುರಳೀಧರ್ ಶಿಂಗೋಟೆ ಅವರು ದಿನಪತ್ರಿಕೆಗಳ ಮಾರಾಟದಿಂದ ಮೊದಲ್ಗೊಂಡು ಪತ್ರಿಕಾ ವಿತರಕರಾಗಿ ನಂತರ  ಪತ್ರಿಕಾ ಸಂಪಾದಕರಾಗಿ ಮುಂದೆ ಪತ್ರಿಕಾ ಸಮೂಹ ಬಳಗದ ಮಾಲಕನಾಗಿ ಅವರ ಸ್ಪೂರ್ತಿದಾಯಕ ಪ್ರಯಾಣವು ಸದಾ ಸ್ಮರಣೀಯ.
ಮುಂಬಯಿ ಪತ್ರಿಕಾ ಕ್ಷೇತ್ರದಲ್ಲಿ ಅವರ ಸಾಧನೆಗಳು ನಿಜಕ್ಕೂ ಅನೇಕರಿಗೆ ಮಾರ್ಗದರ್ಶನ  ನೀಡಿರುತ್ತದೆ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button