ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನೂಪುರ ಶರ್ಮಾ ಅವರನ್ನು ಬೆಂಬಲಿಸಿ ಜಾಲತಾಣದಲ್ಲಿ ಪೋಸ್ಟ್ ಹಾಕಿದ ಕಾರಣಕ್ಕೆ ದುಷ್ಕರ್ಮಿಗಳು ರಾಜಸ್ಥಾನದಲ್ಲಿ ಟೇಲರ್ ಕನ್ಹಯ್ಯಲಾಲ್ ಅವರ ಹತ್ಯೆ ನಡೆಸಿದ ಪ್ರಕರಣದ ಬಿಸಿ ಆರುವ ಮುನ್ನವೇ ಇದೇ ಕಾರಣಕ್ಕೆ ಮಹಾರಾಷ್ಟ್ರದ ಅಮರಾವತಿಯಲ್ಲಿ ಮೆಡಿಕಲ್ ಶಾಪ್ ಒಂದರ ಮಾಲೀಕ ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದಾನೆ.
ಕನ್ಹಯ್ಯಲಾಲ್ ಕೊಲೆಗಿಂತ ಒಂದು ವಾರ ಮೊದಲೇ ಈ ಘಟನೆ ನಡೆದಿದೆ. ಉಮೇಶ ಪ್ರಹ್ಲಾದರಾವ್ ಕೊಲ್ಹೆ (54) ಹತ್ಯೆಗೀಡಾದವರು. ನೂಪುರ ಶರ್ಮಾ ಅವರನ್ನು ಬೆಂಬಲಿಸಿ ಉಮೇಶ ಅವರು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಇದಕ್ಕೆ ಪ್ರತ್ಯುತ್ತರ ಎಂಬಂತೆ ದುಷ್ಕರ್ಮಿಗಳು ಕಳೆದ ಜೂ.21ರಂದು ಹತ್ಯೆ ಮಾಡಿದ್ದಾರೆ.
ಕೆಲ ವಾಟ್ಸಾಪ್ ಗ್ರುಪ್ ಗಳಲ್ಲಿ ಅವರು ನೂಪುರ ಶರ್ಮಾ ಅವರ ಪರ ಸಂದೇಶಗಳನ್ನು ಶೇರ್ ಮಾಡಿದ್ದು ಇದೇ ಅವರ ಕೊಲೆಗೆ ಕಾರಣವಾಗಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಪ್ರಕರಣದ ಪ್ರಮುಖ ಆರೋಪಿ ಇರ್ಫಾನ್ ಖಾನ್ (32) ಅಮರಾವತಿಯಲ್ಲಿ ಎನ್ ಜಿಒ ಇಂದನ್ನು ನಡೆಸುತ್ತಿದ್ದು ಈತ ಇತರ ಆರೋಪಿಗಳಿಗೆ ತಲಾ 10 ಸಾವಿರ ನೀಡುವುದಾಗಿ ಹೇಳಿ ಈ ಕೃತ್ಯದಲ್ಲಿ ತೊಡಗಿಸಿದ್ದಾನೆ ಎಂದು ಅಮರಾವತಿ ಪೊಲೀಸ್ ಆಯುಕ್ತೆ ಡಾ. ಆರತಿ ಸಿಂಗ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಜೂ.21ರ ರಾತ್ರಿ 10ರಿಂದ 10.30ರ ಅವಧಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಅಂದು ತಮ್ಮ ಔಷಧದಂಗಡಿ ಮುಚ್ಚಿದ ನಂತರ ಉಮೇಶ ಕೊಲ್ಹೆ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದರು. ಪ್ರತ್ಯೇಕ ದ್ವಿಚಕ್ರ ವಾಹನದಲ್ಲಿ ಅವರ ಪತ್ನಿ ವೈಷ್ಣವಿ ಹಾಗೂ ಪುತ್ರ ಸಂಕೇತ ಅವರ ಜೊತೆಗಿದ್ದರು ಎನ್ನಲಾಗಿದೆ.
ಮಹಿಳಾ ಕಾಲೇಜು ಎದುರು ತಲುಪಿದಾಗ ಉಮೇಶ ಅವರ ಬೈಕ್ ಗೆ ಇಬ್ಬರು ಬೈಕ್ ಸವಾರರು ಅಡ್ಡಗಟ್ಟಿದರು. ಈ ವೇಳೆ ಉಳಿದ ಆರೋಪಿಗಳು ಸುತ್ತುವರಿದು ಹರಿತ ಕತ್ತಿಯಿಂದ ಉಮೇಶ ಅವರ ಕತ್ತು ಸೀಳಿ ಕೊಲೆ ಮಾಡಿದ್ದಾರೆ. ಈ ಕುರಿತು ಉಮೇಶ ಅವರ ಪುತ್ರ ಸಂಕೇತ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಸಿಸಿ ಟಿವಿ ಫೂಟೇಜ್ ಆಧಾರದಲ್ಲಿ ತನಿಖೆ ಕೈಗೊಂಡ ಪೊಲೀಸರು ಮುದಸ್ಸಿರ್ ಅಹಮ್ಮದ (22), ಶಾರೂಖ್ ಪಠಾಣ (25), ಅಬ್ದುಲ್ ತೌಫೀಕ್ (24), ಶೊಹೈಬ್ ಖಾನ್ (22), ಅತೀಬ್ ರಷೀದ್ (22) ಎಂಬುವವರನ್ನು ಬಂಧಿಸಿದ್ದು ಇನ್ನಷ್ಟು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಆರೋಪಿಗಳ ಪೈಕಿ ಪೈಕಿ ಶಾರೂಖ್ ಮತ್ತು ಮುದಸ್ಸಿರ್ ತಾವೇ ಈ ಕೊಲೆ ಮಾಡಿದ್ದಾಗಿ ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದೇಶಾದ್ಯಂತ ಕನ್ಹಯ್ಯ ಲಾಲ್ ಹತ್ಯೆ ಪ್ರಕರಣಕ್ಕೆ ಜಿಹಾದಿಗಳ ವಿರುದ್ಧ ತೀವ್ರ ಆಕ್ರೋಶಗಳು ವ್ಯಕ್ತವಾಗಿ ನಾನಾ ಬೆಳವಣಿಗೆಗಳಿಗೆ ಕಾರಣವಾಗುತ್ತಿರುವ ಬೆನ್ನಲ್ಲೇ ಈ ಪ್ರಕರಣ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ನೂಪುರ್ ಶರ್ಮಾ ಬೆಂಬಲಿಸಿದ್ದ ಮತ್ತೋರ್ವ ವ್ಯಕ್ತಿ ಬರ್ಬರ ಹತ್ಯೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ