ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಏಕರೂಪ ನಾಗರಿಕ ಸಂಹಿತೆ (Uniform Civil Code) ಕುರಿತು ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (AIMPLB) ಮತ್ತು ಜಮೀಯತ್ ಉಲೇಮಾ-ಎ-ಹಿಂದ್ ಆಕ್ಷೇಪ ವ್ಯಕ್ತಪಡಿಸಿವೆ.
ಪ್ರಧಾನಿ ನರೇಂದ್ರ ಮೋದಿ ಅವರು ಭೋಪಾಲ್‌ನಲ್ಲಿ ಮಂಗಳವಾರ ಏಕರೂಪ ನಾಗರಿಕ ಸಂಹಿತೆಯ ಮೇಲೆ ಜನರನ್ನು ಪ್ರಚೋದಿಸಲಾಗುತ್ತಿದ್ದು ಈ ಭ್ರಮೆಯನ್ನು ಬಿಜೆಪಿ ತೊಲಗಿಸುತ್ತದೆ. ಒಂದು ಮನೆಯನ್ನು ಎರಡು ಕಾನೂನುಗಳಿಂದ ನಡೆಸಲಾಗುವುದಿಲ್ಲ ಎಂದು ಹೇಳಿದ್ದರು.
ಆದರೆ ಮೋದಿಯವರ ಈ ಹೇಳಿಕೆಗೆ ಆಕ್ಷೇಪಿಸಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮತ್ತು ಜಮೀಯತ್ ಉಲೇಮಾ-ಎ-ಹಿಂದ್, ಈ ವಿಷಯಕ್ಕೆ ಸಂಬಂಧಿಸಿದಂತೆ ಮಂಗಳವಾರ ಸಭೆ ನಡೆಸಿ ಇಡೀ ದೇಶಕ್ಕೆ ಏಕರೂಪದ ಕಾನೂನು ರೂಪಿಸುವುದು ಸಂವಿಧಾನಕ್ಕೆ ವಿರುದ್ಧವಾಗಿದೆ. ಪ್ರತಿಯೊಬ್ಬರಿಗೂ ಅವರವರ ಧರ್ಮ ಮತ್ತು ಸಂಸ್ಕೃತಿಯನ್ನು ಅನುಸರಿಸುವ ಹಕ್ಕಿದೆ ಎಂದು ಭಾರತದ ಸಂವಿಧಾನವೇ ಹೇಳಿದೆ ಎಂದು ಪ್ರತಿಪಾದಿಸಿವೆ. ಜತೆಗೆ ಷರಿಯತ್ ಕಾನೂನುಗಳನ್ನು ಉಲ್ಲೇಖಿಸುವ ಕರಡನ್ನು ಸಿದ್ಧಪಡಿಸಿದ್ದು ಶೀಘ್ರವೇ ಅದನ್ನು ಕಾನೂನು ಆಯೋಗಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿವೆ.
ಕಾನೂನು ಆಯೋಗ ಏಕರೂಪ ಕಾನೂನು ಸಂಹಿತೆ ಕುರಿತು ಜನಸಾಮಾನ್ಯ ಅಭಿಪ್ರಾಯಗಳನ್ನು ಆಹ್ವಾನಿಸಿದೆ. ಮುಸ್ಲಿಂ ಧರ್ಮಗುರುಗಳ ಸಂಘಟನೆಯಾದ ಜಮೀಯತ್ ಉಲೇಮಾ-ಎ-ಹಿಂದ್ ನ ಕಾರ್ಯದರ್ಶಿ ನಿಯಾಜ್ ಅಹ್ಮದ್ ಫಾರೂಕಿ ಅವರು ಯುಸಿಸಿ ಕುರಿತು ಪ್ರಧಾನಿ ಹೇಳಿಕೆಗಳು ಕಾನೂನು ಆಯೋಗದ ಮೇಲೆ ಪ್ರಭಾವ ಬೀರಬಹುದು ಎಂದು ಹೇಳಿದ್ದಾರೆ. ಇಂಥ ಹೇಳಿಕೆ ನೀಡುವುದು ಪ್ರಧಾನಿ ಸ್ಥಾನಮಾನಕ್ಕೆ ಗೌರವವಲ್ಲ. ಹೇಳಿಕೆ ನೀಡುವ ಮುನ್ನ ಪ್ರಧಾನಿಯವರು ಕಾನೂನು ಆಯೋಗದ ಸಲಹೆ ಕೂಡ ಪಡೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ