Belagavi NewsBelgaum NewsKannada NewsKarnataka News

*ಬೆಳಗಾವಿ ಪೊಲೀಸರಿಂದ “ನನ್ನ ಬೆಳಗಾವಿ ನನ್ನ ಸಲಹೆ”: ಏನಿದರ ವಿಶೇಷ?*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಮನೆಮನೆಗೆ ಪೊಲೀಸ್ ವ್ಯವಸ್ಥೆ ಅಪರಾಧಗಳ ನಿಯಂತ್ರಣಕ್ಕೆ ಇದು ಸಹಕಾರಿಯಾಗಲಿದೆ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ ತಿಳಿಸಿದರು. 

ಬುಧವಾರ ನಗರದ ವಾರ್ತಾ ಭವನದಲ್ಲಿ ಬೆಳಗಾವಿ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮನೆಮನೆಗೆ ಪೊಲೀಸ್ ವ್ಯವಸ್ಥೆಯು ಪೊಲೀಸ್ ಇಲಾಖೆಯ ಕುರಿತು ಜನರ ಮನಸ್ಸಿನಲ್ಲಿರುವ ಭಯವನ್ನು ಹೋಗಲಾಡಿಸಿ, ಭರವಸೆ ಹಾಗೂ ಉತ್ತಮ ಬಾಂಧವ್ಯಕ್ಕೆ ಕಾರಣವಾಗುತ್ತದೆ. ಮಹಿಳೆಯರು, ಮಕ್ಕಳು ಹಾಗೂ ಮನೆಯಲ್ಲಿರುವ ಎಲ್ಲರಿಗೂ ಕಾನೂನಿನ ಅರಿವು ಮೂಡಲಿದೆ. ಇದು ಅಪರಾಧಗಳ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ ಎಂದರು.

ನನ್ನ ಬೆಳಗಾವಿ ನನ್ನ ಸಲಹೆ

ಬೆಳಗಾವಿಗರ ಸಮಸ್ಯೆಯನ್ನು ವ್ಯಕ್ತಪಡಿಸಲು ನಗರ ಪೊಲೀಸ್ ಆಯುಕ್ತಾಲಯದ ವತಿಯಿಂದ ‘ನನ್ನ ಬೆಳಗಾವಿ ನನ್ನ ಸಲಹೆ’ ಎಂಬ ವೆಬ್ಸೈಟ್ ಪ್ರಾರಂಭಿಸಲಾಗಿದ್ದು, ಸಾರ್ವಜನಿಕರು ತಮ್ಮ ಸುತ್ತಮುತ್ತಲು ನಡೆಯುವ ಕಾನೂನುಬಾಹಿರ ಚಟುವಟಿಕೆಗಳು, ಅಪರಾಧ ಕೃತ್ಯಗಳು ಹಾಗೂ ಸಮಸ್ಯೆಗಳ ಕುರಿತು ಇಲ್ಲಿ ಹಂಚಿಕೊಳ್ಳಬಹುದು. ಇದರಿಂದ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ಸಾರ್ವಜನಿಕರು ಯಾವುದೇ ಭಯವಿಲ್ಲದೇ ತಮ್ಮ ಸಲಹೆಗಳನ್ನು ವೆಬ್ಸೈಟ್ ನಲ್ಲಿ ತಿಳಿಸಬಹುದು ಎಂದು ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ಮಾಹಿತಿ ನೀಡಿದರು. 

Home add -Advt

ದಂಡ ಭರಿಸಲು ಬೆಳಗಾವಿ ಒನ್ ಬಳಸಿ 

ವೇಗವಾಗಿ ಬೆಳೆಯುತ್ತಿರುವ ಬೆಳಗಾವಿ ನಗರದಲ್ಲಿ ಟ್ರಾಫಿಕ್ ನಿಯಮಾವಳಿಗಳ ಉಲ್ಲಂಘನೆಯ ಪ್ರಕರಣಗಳು ಹೆಚ್ಚಿವೆ. ಪ್ರಸ್ತುತ ವಾಹನಗಳನ್ನು ತಡೆದು ತಪಾಸಣೆ ನಡೆಸದಂತೆ ಸಿಬ್ಬಂದಿಗೆ ತಿಳಿಸಿದ್ದೇವೆ. ಅಲ್ಲದೇ ಆನ್ಲೈನ್ ಮೂಲಕವೇ ಸಂಚಾರಿ ನಿಯಮಾವಳಿಗಳ ಉಲ್ಲಂಘನೆಗೆ ದಂಡ ವಿಧಿಸಲಾಗುತ್ತಿದೆ. ಈ ದಂಡವನ್ನು ಬೆಳಗಾವಿ ಒನ್ ನಲ್ಲಿಯೇ ಕಟ್ಟುವ ಯೋಜನೆಗೆ ಸಿದ್ಧತೆ ನಡೆಸಿದ್ದೇವೆ. ಟ್ರಕ್ ಅಸೋಸಿಯೇಷನ್ ಪದಾಧಿಕಾರಿಗಳು, ಕೆಎಸ್ಆರ್ಟಿಸಿ ಸಿಬ್ಬಂದಿಯೊಂದಿಗೆ ಚರ್ಚಿಸಲಾಗಿದ್ದು, ಟ್ರಾಫಿಕ್ ಸಮಸ್ಯೆಯುಂಟು ಮಾಡುವ ಸ್ಥಳಗಳನ್ನು ಗುರುತಿಸಲಾಗಿದ್ದು, ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದ ಇಲಾಖೆಗಳಿಗೆ ಪತ್ರ ಬರೆಯಲಾಗಿದೆ ಎಂದು ಭೂಷಣ ಬೂರಸೆ ತಿಳಿಸಿದರು.

ಯುವತಿಯರು, ವಿದ್ಯಾರ್ಥಿನಿಯರ ಹಾಗೂ ಮಹಿಳೆಯರ ಸುರಕ್ಷತೆಗೆ ಪೊಲೀಸ್ ಇಲಾಖೆಯ ಚನ್ನಮ್ಮ ಪಡೆ ಮತ್ತಷ್ಟು ಸಕ್ರಿಯಗೊಳ್ಳಲಿದೆ ಎಂದರು.

Related Articles

Back to top button