ಚಿಕ್ಕೋಡಿ ಮಾದರಿ ಕ್ಷೇತ್ರವನ್ನಾಗಿಸುವುದೇ ನನ್ನ ಕನಸು : ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ

ಬೆಳಗಾವಿ ತಾಲೂಕಿನ ಸುತಗಟ್ಟಿ, ಪರಶ್ಯಾನಟ್ಟಿ, ಶಿವಾಪೂರ, ಹಳೆ ಇದ್ದಲಹೊಂಡ, ನಿಂಗ್ಯಾನಟ್ಟಿ ಹಾಗೂ ಕಟ್ಟಣಭಾವಿ ಗ್ರಾಮದಲ್ಲಿ ಮತಯಾಚಿಸಿದ ಪ್ರಿಯಂಕಾ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಜನತೆ ವಿಶ್ವಾಸವಿಟ್ಟು ಮತ ನೀಡಿದರೆ. ಕ್ಷೇತ್ರದಲ್ಲಿ ಬಾಕಿ ಉಳಿದಿರುವ ಮೂಲಸೌಕರ್ಯ ಅಭಿವೃದ್ಧಿಯೊಂದಿಗೆ ಈ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಅದು ನನ್ನ ಕನಸಾಗಿದೆ ಎಂದು ಚಿಕ್ಕೋಡಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗಾವಿ ತಾಲೂಕಿನ ಸುತಗಟ್ಟಿ, ಪರಶ್ಯಾನಟ್ಟಿ, ಶಿವಾಪೂರ, ಹಳೆ ಇದ್ದಲಹೊಂಡ, ನಿಂಗ್ಯಾನಟ್ಟಿ ಹಾಗೂ ಕಟ್ಟನಭಾವಿ ಗ್ರಾಮದಲ್ಲಿ ಮತಯಾಚಿಸಿ, ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಚಿಕ್ಕೋಡಿ ಭಾಗದಲ್ಲಿ ನೀರಾವರಿ ಯೋಜನೆ ಸಾಕಾರಗೊಳ್ಳಬೇಕಿದೆ. ನನ್ನನ್ನು ಆಯ್ಕೆ ಮಾಡಿ, ಲೋಕಸಭೆಗೆ ಕಳಿಸಿಕೊಟ್ಟರೆ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಿ ಅನುಷ್ಠಾನ ಮಾಡಲಾಗುವುದು ಎಂದು ಹೇಳಿದರು.
ಹಸ್ತವೇ ಈ ದೇಶದ ಶಕ್ತಿ: ದೇಶಕ್ಕೆ ಕಾಂಗ್ರೆಸ್ ಕೊಡುಗೆ ಅಪಾರವಾಗಿದೆ. ಸ್ವಾತಂತ್ರ್ಯ ನಂತರ ಹಸಿವು, ಬಡತನ, ಅನಕ್ಷರತೆಯಿಂದ ಕೂಡಿದ್ದ ಭಾರತ ದೇಶ ಇಂದು ವಿಜ್ಞಾನ, ತಂತ್ರಜ್ಞಾನ, ಆಹಾರ ಸ್ವಾವಲಂಬನೆಗಳಿಸಿ ಬೆಳವಣಿಗೆಯಾಗಲು ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರವಾದದ್ದು. 70 ವರ್ಷದ ಅವಧಿಯಲ್ಲಿ ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಶ್ರಮಿಸಿದೆ. ಮರಭೂಮಿಯಲ್ಲಿ ಭವ್ಯ ಭಾರತ ನಿರ್ಮಾಣ ಮಾಡಿರುವುದು ಕಾಂಗ್ರೆಸ್ ಪಕ್ಷ, ಹಸ್ತವೇ ಈ ದೇಶದ ಶಕ್ತಿ ಎಂದರು.
ಕಾಂಗ್ರೆಸ್ ಪಕ್ಷದ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆ ಜಾರಿ ಮಾಡಿದೆ. ಸಿಎಂ ಸಿದ್ದರಾಮಯ್ಯನವರ ಸರ್ಕಾರ ರಾಜ್ಯದಲ್ಲಿ ಉತ್ತಮ ಆಡಳಿತ ನೀಡುತ್ತಿದೆ. ರಾಜ್ಯದ ಅಭಿವೃದ್ಧಿ ಜೊತೆ ನಾಡಿನ ಹಿತ ಕಾಪಾಡಿಕೊಂಡು ಹೋಗುತ್ತಿರುವ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ ಎಂದರು.
ಈಗಾಗಲೇ ಕಾಂಗ್ರೆಸ್ ಪಕ್ಷ ಲೋಕಸಭೆಯ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಮಹಿಳೆಯರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣವೇ 25 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗುವುದು. ಮತ್ತು ಮಹಿಳೆಯರಿಗೆ ವಿಶೇಷವಾಗಿ ವರ್ಷಕ್ಕೆ ತಲಾ 1 ಲಕ್ಷ ರೂ. ನೀಡಲಾಗುವುದು. ರೈತರ ಹಿತ ರಕ್ಷಣೆಗಾಗಿ ರೈತರ ಸಾಲ ಮನ್ನಾ ಮಾಡಲಾಗುವುದು ಕಾಂಗ್ರೆಸ್ ವರಿಷ್ಠ ನಾಯಕ ರಾಹುಲ್ ಗಾಂಧಿ ಅವರು ಇಂದು ಘೋಷಣೆ ಮಾಡಿದ್ದಾರೆ. ದೇಶದ ಅಭಿವೃದ್ಧಿಗಾಗಿ ಮತದಾರರು ಕಾಂಗ್ರೆಸ್ ಗೆ ಮತ ನೀಡಬೇಕು ಎಂದು ಹೇಳಿದರು.
ತಂದೆಯವರಾದ ಸಚಿವ ಸತೀಶ ಜಾರಕಿಹೊಳಿ ಅವರು ಶಿಕ್ಷಣ, ನೀರಾವರಿ ಹಾಗೂ ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ. ಜನರ ಏಳಿಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಬಡವರಿಗೆ ಬೆನ್ನುಲುಬಾಗಿ ನಿಂತಿರುವ ಅಪರೂಪದ ಸಚಿವರು ಈ ಭಾಗದ ಅಭಿವೃದ್ಧಿಗೆ ಪಣತೊಟ್ಟಿದ್ದಾರೆ. ನಿಮ್ಮ-ಮನೆ ಮಗಳನ್ನು ಆಯ್ಕೆ ಮಾಡಿ ಲೋಕಸಭೆಗೆ ಕಳಿಸಿಕೊಟ್ಟರೆ ಚಿಕ್ಕೋಡಿ ಕ್ಷೇತ್ರದ ಬದಲಾವಣೆಗೆ ಶ್ರಮಿಸುತ್ತೆವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಮಣ್ಣ ಗುಳಿ, ಮಾರುತಿ ಸಜಲಿ, ಶಟ್ಟು ಅಲ್ಲನಗೋಳ, ರೇಣುಕಾ ಗೋಡ್ಯಾಳ, ನಂದಿನಿ ಬಂಗ್ಯಾಗೋಳ, ನಾಗವ್ವ ಸಜಲಿ ಗ್ರಾಮಸ್ಥರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ