Belagavi NewsBelgaum NewsKannada NewsKarnataka NewsPolitics

*ನನ್ನ ಕುಟುಂಬ ಎಂದಿಗೂ ಜಾತಿ  ರಾಜಕೀಯ ಮಾಡಿಲ್ಲ: ಬಾಲಚಂದ್ರ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಾನಾಗಲೀ, ನನ್ನ ಕುಟುಂಬವಾಗಲಿ. ಎಂದಿಗೂ ಜಾತಿ ರಾಜಕೀಯ ಮಾಡಿಲ್ಲ. ಜನರ ಪ್ರೀತಿ, ಆಶೀರ್ವಾದದಿಂದ ನಾವು ಒಂದೇ ಕುಟುಂಬದಲ್ಲಿ ಬೇರೇ ಬೇರೇ ಕ್ಷೇತ್ರಗಳಿಂದ ಸಾರ್ವತ್ರಿಕ ಚುನಾವಣೆಗಳಲ್ಲಿ ಜನರಿಂದ ಆಯ್ಕೆಯಾಗಿದ್ದೇವೆ. ವಿರೋಧಿಗಳ ಆರೋಪದಲ್ಲಿ ಯಾವುದೇ ನಿಜಾಂಶವಿಲ್ಲ ಎಂದು ಅರಭಾವಿ ಶಾಸಕ, ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ತಿಳಿಸಿದರು.

 ಹುಕ್ಕೇರಿ ತಾಲೂಕಿನ ಎಲೆಮುನೋಳಿ ಗ್ರಾಮದಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಲ್ಪ ಸಮುದಾಯದಿಂದ ಬಂದ ತಮ್ಮ ಕುಟುಂಬವು ಎಲ್ಲ ಸಮುದಾಯಗಳ   ಆಶೀರ್ವಾದದಿಂದ ಜನರ ಸೇವೆಯನ್ನು ಮಾಡುತ್ತಿದೆ ಎಂದು ಹೇಳಿದರು.

ಎಲ್ಲ ಜಾತಿ- ಜನಾಂಗದವರು ನಮ್ಮ ಮೇಲೆ ಅಪಾರ ಪ್ರೀತಿಯನ್ನು ಇಟ್ಟುಕೊಂಡಿದ್ದಾರೆ. ನಮ್ಮಲ್ಲಿ ಕೇವಲ 3 ರಿಂದ 5 ಸಾವಿರತನಕ‌ ನಮ್ಮ ಸಮಾಜದವರಿದ್ದಾರೆ. ಲಿಂಗಾಯತರು, ಕುರುಬರು, ಉಪ್ಪಾರರು, ಮುಸ್ಲಿಮರು, ಪಜಾತಿ, ಹೀಗೇ ಅನೇಕ ಜಾತಿಯವರಿದ್ದಾರೆ. ಅವರ ಆಶೀರ್ವಾದದಿಂದ ನಮ್ಮ ಕುಟುಂಬದಲ್ಲಿ ಏಕಕಾಲಕ್ಕೆ ಮೂವರು ಶಾಸಕರು, ತಲಾ ಒಬ್ಬರು ವಿಪ ಸದಸ್ಯರು ಮತ್ತು ಸಂಸದರನ್ನು ಹೊಂದಿದ್ದೇವೆ. ಇದು ದೇಶದಲ್ಲಿಯೇ ದಾಖಲೆಯಾಗಿದೆ. ನಾವು ಕೂಡ ನಮ್ಮ ನಮ್ಮ ಕ್ಷೇತ್ರಗಳಲ್ಲಿ ಎಲ್ಲ ಸಮಾಜಗಳ ಮುಖಂಡರುಗಳಿಗೆ ಎಲ್ಲ ಕ್ಷೇತ್ರಗಳಲ್ಲಿಯೂ ಸ್ಥಾನ- ಮಾನ ನೀಡಿದ್ದೇವೆ ಎಂದು ಅವರು ತಿಳಿಸಿದರು.

ಕಳೆದ 10 ವರ್ಷಗಳಿಂದ ಬಿಡಿಸಿಸಿ ಬ್ಯಾಂಕಿನ ಅಧಿಕಾರ ಚುಕ್ಕಾಣಿ ಹಿಡಿಯಲು ನಾವು ಬೇಕಾಯಿತು. ಆಗ ಅವರಿಗೆ ಕೇವಲ ಇಬ್ಬರ ಸದಸ್ಯರ ಬೆಂಬಲವಿತ್ತು. ನಾವೇ ಅಧಿಕಾರ ನೀಡಿದೇವು.‌ಆಗ ನಮಗೆ ಒಳ್ಳೆಯವರು ಅಂದ್ರು.‌ಆಗ ಜಾತಿ ರಾಜಕೀಯದ ಬಗ್ಗೆ ಮಾತಾಡಲಿಲ್ಲ. ಈಗ ಬೇಡವಾದಾಗ ಜಾತಿಯನ್ನು ಮುಂದೆ ಮಾಡುತ್ತಿದ್ದಾರೆ. ಲಿಂಗಾಯತ ಸಮಾಜದ ವಿರೋಧಿಯಂತೆ ಬಿಂಬಿಸುತ್ತಿದ್ದಾರೆ ಎಂದು ದೂರಿದರು. 

Home add -Advt

ಮೂವತ್ತು ವರ್ಷಗಳಿಂದ ವಿದ್ಯುತ್ ಸಹಕಾರಿ ಸಂಘ ಕತ್ತಿಯವರ ಹಿಡಿತದಲ್ಲಿದೆ. ಗ್ರಾಹಕರಿಗೆ ಸಮರ್ಪಕವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಟ್ಟಿಲ್ಲ. ಹೀಗಾಗಿ ಜನರು ಅಕ್ರೋಶಗೊಂಡಿದ್ದಾರೆ. ರೈತರ ಹಿತಕ್ಕಾಗಿ ನಾವುಗಳು ಸದಾ ಬದ್ಧರಿದ್ದೇವೆ. ನಮಗೂ ಒಂದು ಬಾರೀ ಅವಕಾಶವನ್ನು ನೀಡಿ. ನಿರೀಕ್ಷೆಗಿಂತಲೂ ಹೆಚ್ಚಿನ ಕೆಲಸ ಮಾಡಿ ತೋರಿಸುತ್ತೇವೆ. ಮೊದಲೇ ನಷ್ಟದಲ್ಲಿರುವ ಈ ಸಂಸ್ಥೆಯ ಅಭಿವೃದ್ಧಿಗೆ ಸರ್ಕಾರದ ನೆರವು ಅಗತ್ಯವಿದ್ದು, ಸಚಿವ ಸತೀಶ್ ಜಾರಕಿಹೊಳಿಯವರ ಮೂಲಕ ಈ ಸಂಸ್ಥೆಯನ್ನು ಪ್ರಗತಿ ಮಾಡುತ್ತೇವೆ. ಜೊಲ್ಲೆಯವರ ದೂರದೃಷ್ಟಿಯಿಂದ ದುಡಿಯುವ ವರ್ಗಕ್ಕೆ ಅನುಕೂಲ ಕಲ್ಪಿಸಿಕೊಡುವುದಾಗಿ ಅವರು ಭರವಸೆ ನೀಡಿದರು.

ಸಹಕಾರ ರಂಗದ ಭೀಷ್ಮ ದಿ. ಅಪ್ಪಣ್ಣಗೌಡ ಪಾಟೀಲರ ಹೆಸರಿನಲ್ಲಿ ಫೆನಲ್ ರಚಿಸಿದ್ದು, ಎಲ್ಲ 16 ಸ್ಥಾನಗಳಲ್ಲಿ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ. ಸೆ. 28 ರಂದು ನಡೆಯುವ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ನಮ್ಮ ಫೆನಲಿನ ಅಭ್ಯರ್ಥಿಗಳಿಗೆ ಮತ ನೀಡಿ ಆಶೀರ್ವಾದ ಮಾಡುವಂತೆ ಅವರು ಮತದಾರರಲ್ಲಿ ಮನವಿಯನ್ನು ಮಾಡಿಕೊಂಡರು.

ಚಿಕ್ಕೋಡಿ ಮಾಜಿ ಸಂಸದ ಮತ್ತು ಸಹಕಾರಿ ಮುಖಂಡ ಅಣ್ಣಾಸಾಹೇಬ್ ಜೊಲ್ಲೆಯವರು ಮಾತನಾಡಿ, ಕಳೆದ ಆರು ತಿಂಗಳಿನಿಂದ ಹುಕ್ಕೇರಿ ತಾಲೂಕಿನ ಸಹಕಾರಿ ಚಿತ್ರಣವೇ ಬದಲಾಗಿದೆ. ಯಾವ ಭಯವಿಲ್ಲದೇ ಮತವನ್ನು ಚಲಾಯಿಸಿ. ನಿಮ್ಮ ರಕ್ಷಣೆಗೆ ನಾವೆಲ್ಲರೂ ನಿಲ್ಲುತ್ತೇವೆ. ಸಹಕಾರ ಸಂಘಗಳು ಉಳಿಯಬೇಕು. ಆ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ನಾಯಕರು ಪಕ್ಷ, ಜಾತಿ ಬೇಧ ಮರೆತು ಜನರ ಒಳತಿಗಾಗಿ  ಒಂದಾಗಿ ಕೆಲಸ ಮಾಡುತ್ತಿದ್ದೇವೆ. ನಮ್ಮನ್ನು ಬೆಂಬಲಿಸಿದರೆ ನಿಮಗೆ ಲಾಭವಾಗುತ್ತದೆ. ನೀವು ಹೇಳುವ ಕೆಲಸಗಳು 24 ತಾಸಿನಲ್ಲಿ ಆಗುತ್ತವೆ. ನಿರಂತರ ಜ್ಯೋತಿ, ವಿದ್ಯುತ್ ಟ್ರಾನ್ಸ್ ಫಾರ್ಮರ್ ಗಳು ರೈತರಿಗೆ ತ್ವರಿತ ಗತಿಯಲ್ಲಿ ಸಿಗಲಿವೆ ಎಂದವರು ಹೇಳಿದರು.

ಈ ಸಂದರ್ಭದಲ್ಲಿ  ಮಾಜಿ ಸಚಿವ ಶಶಿಕಾಂತ ನಾಯಿಕ, ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಜಯಗೌಡ ಪಾಟೀಲ, ಸಂಕೇಶ್ವರ ಹೀರಾ ಶುಗರ್ಸ್ ಅಧ್ಯಕ್ಷ ಬಸವರಾಜ ಕಲ್ಲಟ್ಟಿ, ಅಶೋಕ ಪಟ್ಟಣಶೆಟ್ಟಿ, ರವಿ ಹಿಡ್ಕಲ್, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜೇಂದ್ರ ಅಂಕಲಗಿ, ವಿವಿಧ ಸಹಕಾರಿಗಳು, ಜಿ.ಪಂ. ವ್ಯಾಪ್ತಿಯ ಅನೇಕ ಮುಖಂಡರು ಉಪಸ್ಥಿತರಿದ್ದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಮತ್ತು ಅಣ್ಣಾಸಾಹೇಬ್ ಜೊಲ್ಲೆಯವರು ಹುಕ್ಕೇರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಚುನಾವಣೆ ನಿಮಿತ್ತ ಪ್ರಚಾರ ಸಭೆಗಳನ್ನು ನಡೆಸಿದರು.

Related Articles

Back to top button