
ಮೈಸೂರು ದಸರಾ: ಗಜಪಯಣಕ್ಕೆ ಚಾಲನೆ
ಪ್ರಗತಿವಾಹಿನಿ ಸುದ್ದಿ; ಮೈಸೂರು: ಮೈಸೂರು ದಸರಾ ಮಹೋತ್ಸವಕ್ಕೆ ಕೆಲವೇ ದಿನಗಳು ಬಾಕಿಯಿದ್ದು, ಇಂದು ಅಭಿಮನ್ಯು ನೇತೃತ್ವದಲ್ಲಿ ೯ ಗಜಪಡೆಗಳ ಪಯಣಕ್ಕೆ ಅಧಿಕೃತ ಚಾಲನೆ ನೀಡುವ ಮೂಲಕ ದಸರಾಗೆ ಮುನ್ನುಡಿ ಬರೆಯಲಾಯಿತು.
ಈ ವೇಳೆ ಮಾತನಾಡಿದ ಅರಣ್ಯ ಸಚಿವ ಈಶ್ವರ ಖಂಡ್ರೆ, ದಸರಾ ಮಹೋತ್ಸವದಲ್ಲಿ ಭಗವಹಿಸುವ ಗಜಪಡೆಗಳ ಪಯಣಕ್ಕೆ ಇಂದು ಚಾಲನೆ ನೀಡಲಾಗಿದೆ. ಈ ಬಾರಿಯೂ ಅಭಿಮನ್ಯು ಆನೆಯೇ ಅಂಬಾರಿ ಹೊರಲಿದೆ ಎಂದರು.
ಐತಿಹಾಸಿಕ ದಸರಾ ಆರಂಭವಾಗಿದ್ದು, ಗಜಪಯಣಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ಕಾಡಿನಿಂದ ನಾಡಿಗೆ ಆನೆಗಳು ಸಾಗುತ್ತಿವೆ. ಈ ಬಾರಿ ಅಂಜನ್ ಎಂಬ ಆನೆ ಗಜಪಡೆಗೆ ಹೊಸದಾಗಿ ಸೇರ್ಪಡೆಯಾಗಿದೆ ಒಂದುವರೆ ತಿಂಗಳು ಗಜಪಡೆಗಳು ತಾಲೀಮಿನಲ್ಲಿ ಭಗವಹಿಸಲಿವೆ. ನಿಶಾನೆಗಳನ್ನು ಇನ್ನೂ ನಿರ್ಧಾರ ಮಾಡಿಲ್ಲ. ನಾಡ ಅದಿದೇವತೆ ಚಾಮುಂಡೇಶ್ವರಿ ಆಶಿರ್ವಾದ ಸಮಸ್ತ ನಾಡಿನ ಜನತೆ ಮೇಲೆ ಇರಲಿ ಎಂದು ಸಚಿವರು ತಿಳಿಸಿದರು.