Belagavi NewsBelgaum NewsKarnataka NewsLatest

*ಮೈಸೂರು ದಸರಾ 2026*: *ಗಮನ ಸೆಳೆದ ಕೆ.ಎಲ್.ಇ. ಸಂಸ್ಥೆಯ ಸ್ತಬ್ಧಚಿತ್ರ*

ಬಸವತತ್ವಗಳಿಂದ ಸಬಲ ಸಮಾಜದತ್ತ

ಪ್ರಗತಿವಾಹಿನಿ ಸುದ್ದಿ: ಕರ್ನಾಟಕ ಲಿಂಗಾಯತ ಶಿಕ್ಷಣ (ಕೆ.ಎಲ್.ಇ.) ಸಂಸ್ಥೆಯು ಪ್ರಸ್ತುತಪಡಿಸುವ ಈ ಸ್ತಬ್ಧಚಿತ್ರವು 12ನೇ ಶತಮಾನದ ವಿಶ್ವಗುರು ಬಸವಣ್ಣನವರು ಹಾಗೂ ಶರಣರು ಪ್ರತಿಪಾದಿಸಿದ ಸಾಮಾಜಿಕ ಪರಿವರ್ತನೆಯ ಮಹಾನ್ ಚಿಂತನೆಯಿಂದ ಆರಂಭಗೊಂಡು, ಶಿಕ್ಷಣ, ಜ್ಞಾನ ಮತ್ತು ಸೇವೆಯ ಮೂಲಕ ಆಧುನಿಕ ಸಮಾಜದ ಸಬಲೀಕರಣದವರೆಗೆ ಸಾಗಿರುವ ನಿರಂತರ ಪಯಣವನ್ನು ಪ್ರತಿಬಿಂಬಿಸುತ್ತದೆ.

ವಿಶ್ವಗುರು ಬಸವಣ್ಣನವರು ಮಾನವ ಘನತೆ, ಕಾಯಕ, ದಾಸೋಹ, ಸಮಾನತೆ, ಸಾಮಾಜಿಕ ನ್ಯಾಯ, ಮಹಿಳಾ ಸಬಲೀಕರಣ ಮತ್ತು ಆಧ್ಯಾತ್ಮಿಕ ಪ್ರಜಾಸತ್ತಾತ್ಮಕತೆಯ ತಳಹದಿಯ ಮೇಲೆ ಸಮಾಜವನ್ನು ರೂಪಿಸುವ ದೂರದೃಷ್ಟಿಯನ್ನು ಹೊಂದಿದ್ದರು. ಸಮಸಮಾಜದ ಪರಿಕಲ್ಪನೆಯನ್ನು ಸಾಕಾರಗೊಳಿಸಿದ ಬಸವಾದಿ ಶರಣ-ಶರಣೆಯರ ವಚನ ಚಳವಳಿಯ ಕೇಂದ್ರಭಾಗವಾಗಿದ್ದ ʼಅನುಭವ ಮಂಟಪʼವು, ಆಧ್ಯಾತ್ಮಿಕ, ಧಾರ್ಮಿಕ ಮತ್ತು ಸಾಮಾಜಿಕ ಪ್ರಜಾಸತ್ತಾತ್ಮಕ ಚಿಂತನೆಯ ಆದ್ಯಪ್ರವರ್ತಕ ವೇದಿಕೆಗಳಲ್ಲಿ ಒಂದಾಗಿ ಜಾಗತಿಕವಾಗಿ ಗುರುತಿಸಲ್ಪಟ್ಟಿದೆ. ಆಡು ಭಾಷೆ ಕನ್ನಡದ ಮೂಲಕ ಈ ವಿಚಾರಕ್ರಾಂತಿಯ ಜೀವಂತ ಪ್ರತಿರೂಪವಾಗಿ ಸ್ತಬ್ಧಚಿತ್ರದಲ್ಲಿ ವಿಶ್ವಗುರು ಬಸವಣ್ಣನವರು, ಅಲ್ಲಮಪ್ರಭು, ಅಕ್ಕಮಹಾದೇವಿ ಹಾಗೂ ಇತರ ಶರಣರನ್ನು ಪ್ರತಿಬಿಂಬಿಸಲಾಗಿದೆ.


ಸ್ತಬ್ಧಚಿತ್ರದ ದ್ವಿತೀಯ ಭಾಗವು ವಿಚಾರ ಕ್ರಾಂತಿಯಿಂದ ಶಿಕ್ಷಣ ಕ್ರಾಂತಿಯತ್ತ ಸಾಗಿದ ಪರಿವರ್ತನೆಯನ್ನು ಸಂಕೇತಿಸುತ್ತದೆ. ಈ ಪರಿವರ್ತನೆಯ ಸಂಕೇತವೇ ‘ಜ್ಞಾನದ ಸೇತುವೆ’. ಇದು 12ನೇ ಶತಮಾನದ ಸಾಮಾಜಿಕ ಜಾಗೃತಿಯನ್ನು 19ನೇ ಶತಮಾನದ ಉತ್ತರಾರ್ಧ ಮತ್ತು 20ನೇ ಶತಮಾನದ ಆರಂಭದ ಶಿಕ್ಷಣ ಜಾಗೃತಿಯೊಂದಿಗೆ ಬೆಸೆಯುತ್ತದೆ. ಅಥಣಿ ಶಿವಯೋಗಿಗಳವರಾದಿಯಾಗಿ ಅನೇಕ ಪರಮಪೂಜ್ಯರು ಶಿಕ್ಷಣದ ಮಹತ್ವವನ್ನು ಸಮಾಜದಲ್ಲಿ ಬಿತ್ತಿ, ಮುಂದಿನ ಪೀಳಿಗೆಗಳಿಗೆ ಪ್ರೇರಣೆಯಾದರು.

ಈ ಚಿಂತನಾ ಪರಂಪರೆಯನ್ನು ಮುಂದುವರಿಸಿ ಶಿಕ್ಷಣ ಮತ್ತು ಸಾಮಾಜಿಕ ಅಭಿವೃದ್ಧಿಯ ಹೊಸ ಯುಗಕ್ಕೆ ದಾರಿದೀಪವಾದ ಗಣ್ಯ ಲಿಂಗಾಯತ ಮಹನೀಯರಲ್ಲಿ ಶ್ರೀ ಸಿರಸಂಗಿ ಲಿಂಗರಾಜ ದೇಸಾಯಿಯವರು, ಶ್ರೀ ರಾಜಾ ಲಖಮನಗೌಡರು, ರಾವ್ ಬಹದ್ದೂರ್ ಅರಟಾಳ ರುದ್ರಗೌಡರು, ಶ್ರೀ ಗಿಲಗಿಂಜಿ ಗುರುಸಿದ್ದಪ್ಪನವರು, ಶ್ರೀ ಡೆಪ್ಯೂಟಿ ಚನ್ನಬಸಪ್ಪನವರು, ರಾವ್ ಬಹದ್ದೂರ್ ವಿ. ಜಿ. ನಾಯಕ-ಚಚಡಿಯವರು, ರಾವ್ ಬಹದ್ದೂರ್ ವೈಜಪ್ಪ ಅನಿಗೋಳರವರು, ರಾವ್ ಬಹದ್ದೂರ್ ಫಕೀರಪ್ಪ ಹಳಕಟ್ಟಿಯವರು, ಸರ್ ಸಿದ್ಧಪ್ಪ ಕಂಬಳಿಯವರು, ಶ್ರೀ ಬಿ. ವಿ. ಭೂಮರಡ್ಡಿಯವರು ಹಾಗೂ ಶ್ರೀ ಗುಬ್ಬಿ ತೋಟದಪ್ಪನವರು ಪ್ರಮುಖರು. ಇವರೊಂದಿಗೆ, ‘ಸಪ್ತರ್ಷಿಗಳು’ ಎಂದು ಗೌರವದಿಂದ ಸ್ಮರಿಸಲ್ಪಡುವ ಪ್ರೊ. ಎಂ. ಆರ್. ಸಾಖರೆ, ಪ್ರೊ. ಎಸ್. ಎಸ್. ಬಸವನಾಳ, ಶ್ರೀ ಬಿ. ಬಿ. ಮಾಮದಾಪುರ, ಶ್ರೀ ಎಚ್. ಎಫ್. ಕಟ್ಟಿಮನಿ, ಶ್ರೀ ಬಿ. ಎಸ್. ಹಂಚಿನಾಳ, ಶ್ರೀ ಪಿ. ಆರ್. ಚಿಕ್ಕೋಡಿ ಹಾಗೂ ಶ್ರೀ ವಿ. ವಿ. ಪಾಟೀಲ ಅವರ ಅಮೂಲ್ಯ ಕೊಡುಗೆಯನ್ನೂ ಇಲ್ಲಿ ಪ್ರತಿನಿಧಿಸಲಾಗಿದೆ. ಸಮಾಜದ ಉನ್ನತಿ ಮತ್ತು ಶಿಕ್ಷಣದ ಮೂಲಕ ಸಬಲೀಕರಣ ಎಂಬ ಮಹೋನ್ನತ ಧ್ಯೇಯಕ್ಕಾಗಿ ಇವರೆಲ್ಲರೂ ತಮ್ಮ ಬದುಕನ್ನು ಸಮರ್ಪಿಸಿದರು. ಈ ಚಿಂತನಾ ಮತ್ತು ಶಿಕ್ಷಣ ಪರಂಪರೆ 1916ರಲ್ಲಿ ಬೆಳಗಾವಿಯಲ್ಲಿ ಕೆ.ಎಲ್.ಇ. ಸಂಸ್ಥೆಯ ಸ್ಥಾಪನೆಯೊಂದಿಗೆ ಹೊಸ ಆಯಾಮವನ್ನು ಪಡೆದುಕೊಂಡಿತು.

ಶಿಕ್ಷಣವನ್ನು ಸಾಮಾಜಿಕ ಪರಿವರ್ತನೆ ಮತ್ತು ಸಬಲೀಕರಣದ ಸಾಧನವನ್ನಾಗಿ ರೂಪಿಸಿದ ಈ ಪಯಣವು ಕಾಲಕ್ರಮೇಣ ಶಾಲಾ ಶಿಕ್ಷಣದಿಂದ ಉನ್ನತ ಮತ್ತು ವೃತ್ತಿಪರ ಶಿಕ್ಷಣ, ತಾಂತ್ರಿಕ ಶಿಕ್ಷಣ, ಆರೋಗ್ಯ ಸೇವೆ, ಸಂಶೋಧನೆ ಹಾಗೂ ಸಮುದಾಯಾಭಿವೃದ್ಧಿಯ ವಿವಿಧ ಕ್ಷೇತ್ರಗಳಿಗೆ ವಿಸ್ತರಿಸಿತು.


ಈ ಸ್ತಬ್ಧಚಿತ್ರವು ಕೇವಲ ಭೂತಕಾಲದ ಇತಿಹಾಸದ ಚಿತ್ರಣ ಮಾತ್ರವಾಗಿರದೆ, ಬಸವಣ್ಣ ಮತ್ತು ಶರಣರ ಸಮಾನತೆ ಹಾಗೂ ಮಾನವ ಘನತೆಯ ಚಿಂತನೆಯಿಂದ ಆರಂಭಗೊಂಡು, ಜ್ಞಾನದ ಮೂಲಕ ಸಮಾಜದ ಸಬಲೀಕರಣದವರೆಗೆ ಸಾಗಿದ ನಿರಂತರ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಸಮಾನತೆಯಿಂದ ಸಾಮಾಜಿಕ ಜಾಗೃತಿಗೆ, ಸಾಮಾಜಿಕ ಜಾಗೃತಿಯಿಂದ ಜ್ಞಾನಾನ್ವೇಷಣೆಗೆ, ಜ್ಞಾನದಿಂದ ಸಬಲೀಕರಣದತ್ತ ಸಾಗುವ ಪಯಣವೇ ಸಬಲ ಸಮಾಜ ನಿರ್ಮಾಣದ ದಾರಿ. ಈ ನಿರಂತರ ಪರಿವರ್ತನೆಯ ಆಶಯವನ್ನೇ ಸ್ತಬ್ಧಚಿತ್ರದ ಶೀರ್ಷಿಕೆ ಅರ್ಥಪೂರ್ಣವಾಗಿ ಪ್ರತಿಧ್ವನಿಸುತ್ತದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button