ಪ್ರಗತಿವಾಹಿನಿ ಸುದ್ದಿ; ಮೈಸೂರು: ಒಂದು ವೇಳೆ ರಸ್ತೆಯಲ್ಲಿ ಹಣ ಬಿದ್ದಿದ್ದರೆ ಎತ್ತಿಕೊಂಡು ಹೋಗೋದು ಸಾಮಾನ್ಯ. ಆದರೀಗ ಕೊರೊನಾ ಭೀತಿ ಎಷ್ಟರ ಮಟ್ಟಿಗೆ ಜನರನ್ನು ಕಾಡಿದೆ ಎಂದರೆ ರಸ್ತೆಯಲ್ಲಿ ಹಣ ಬಿದ್ದರೂ ಕೂಡ ಜನ ದೂರ ಓಡುತ್ತಿದ್ದಾರೆ. ಕರೆನ್ಸಿಯಿಂದ ಕೊರೊನಾ ವೈರಸ್ ಹರಡುತ್ತದೆ ಎಂಬ ವದಂತಿ ಹಿನ್ನಲೆಯಲ್ಲಿ ಜನರು ರಸ್ತೆಯಲ್ಲಿ ಹಣ ಬಿದ್ದಿದ್ದರೂ ಅದನ್ನು ಎತ್ತಿಕೊಳ್ಳುತ್ತಿಲ್ಲ.
ಹೌದು. ಕೊರೊನಾ ಭೀತಿಯಿಂದಾಗಿ ಜನರು ರಸ್ತೆಯಲ್ಲಿ ಬಿದ್ದಿದ್ದ ನೋಟಿಗೆ ಬೆಂಕಿ ಇಟ್ಟ ಘಟನೆಯೊಂದು ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ನಜರ್‍ಬಾದ್‍ನಲ್ಲಿ ಈ ಘಟನೆ ನಡೆದಿದ್ದು, ಮೈಲಾರಿ ಹೋಟೆಲ್ ಬಳಿ ಬಿದ್ದಿದ್ದ 100ರೂ ಹೊಸ ನೋಟು ನೋಡಿ ಆತಂಕಗೊಂಡ ಜನ, ತಕ್ಷಣ ಅದಕ್ಕೆ ಸ್ಯಾನಿಟೈಸರ್ ಹಾಕಿ ಬೆಂಕಿ ಹಚ್ಚಿದ್ದಾರೆ.
ಎರಡು ದಿನಗಳ ಹಿಂದೆ ಮೈಸೂರಿನ ಹೆಬ್ಬಾಳ್‍ನಲ್ಲೂ ಹೀಗೆ ಕಿಡಿಗೇಡಿಗಳು 50 ರೂಪಾಯಿ ನೋಟು ಬಿಸಾಕಿ ಹೋಗಿದ್ದರು. ರಾಜ್ಯ ಮಾತ್ರವಲ್ಲ ದೇಶದ ವಿವಿಧ ಭಾಗಗಳಲ್ಲೂ ಇಂತಹ ಘಟನೆ ನಡೆದಿದೆ. ಧರ್ಮಶಾಲಾದಲ್ಲಿ ವ್ಯಕ್ತಿಯೊಬ್ಬ ಸಂಶಯಾಸ್ಪದವಾಗಿ ರಸ್ತೆಯಲ್ಲಿ ನೋಟುಗಳ ಸುರಿಮಳೆಗೈದಿದ್ದ ಆದರೂ ಯಾರೊಬ್ಬರೂ ಹಣ ಎತ್ತಿಕೊಳ್ಳಲು ಹತ್ತಿರಕ್ಕೂ ಸುಳಿದಿರಲಿಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ